ಭಾನುವಾರ, ಆಗಸ್ಟ್ 2, 2020

ತನಾಶಿ ಅವರ ಮರುಳು ಮುನಿಯನ ಕಗ್ಗ

ಮರುಳ ಮುನಿಯನ ಕಗ್ಗ.        ೩೮೩.
- ತನಾಶಿ


ಎಲೆ ಹಸಿರು ಹೂ ಬಿಳ್ಪು ಜಾಜಿಯೊಂದರೊಳೆಂತು
ಹುಳಿಸಿಹಿಗಳೊಂದೆ ಮಾವಿನ ಕಾಯೊಳೆಂತು
ಒಳಿತು ಕೆಡಕಂತು ಮಾಯಾಯಂತ್ರವೊಂದರಿನೆ
ನೆಲವೊಂದು ಬೆಳೆ ಹಲವು ಮರುಳ ಮುನಿಯ||೩೮೩||



ಸಾಮಾನ್ಯವಾಗಿ ವಿರೋಧಾಭಾಸಗಳು ಒಟ್ಟಿಗೇ ಇರುತ್ತವೆ. ಅದೇ ಜೀವನದ ವೈಶಿಷ್ಟ್ಯ. ಹಾಗೆ ಇದ್ದಾಗಲೇ ಬಾಳು ರೋಚಕ. ಸಂಘರ್ಷವಿಲ್ಲದ ಯಾವುದೂ ತೃಪ್ತಿ ನೀಡುವುದಿಲ್ಲ.
ಜಾಜಿ ಮಲ್ಲಿಗೆಯು ಸುಗಂಧಕ್ಕೆ ಪ್ರಸಿದ್ಧ. ಮಲ್ಲಿಗೆಯ ಗಿಡವನ್ನು ನೋಡಿದಾಗ ಎಲೆಯು ಗಾಢ ಹಸಿರಾಗಿ, ಹೂವು ಅಚ್ಚಬಿಳುಪಾಗಿ ಕಾಣುತ್ತದೆ. ಇದು ಏಕೆ ಹೀಗೆ? ಮಾವು ಹಣ್ಣುಗಳ ರಾಜ. ಅದು ಕಾಯಾಗಿದ್ದಾಗ ಹುಳಿ, ಬಲಿತು ದೋರೆಯಾದಾಗ ಸಿಹಿಹುಳಿಗಳ ಮಿಶ್ರಣ, ಹಣ್ಣಾದಾಗ ಸಿಹಿಯೋ ಸಿಹಿ. ಇದು ಒಂದೇ ಮಾವಿನಕಾಯಲ್ಲಿ ಕಂಡುಬರುತ್ತದೆ. 
ಮಾನವನೆಂಬ ನರನೇ ನಿಜದ ಮಹಾಯಂತ್ರ. ಅಥವಾ ಮಾಯಾಯಂತ್ರ. ಮನುಜನ ಒಳಗೇ ಒಳಿತು ಕೆಡುಕಿನ ಗುಣಗಳಿವೆ.  ಅವು ಒಟ್ಟಿಗೇ ಇರುತ್ತವೆ ಎಂಬುದೇ ವಿಶೇಷ. ನೆಲವೊಂದೇ ಆದರೂ ನಾವು ಅನೇಕ ಬೆಳೆಗಳನ್ನು ಬೆಳೆಯುತ್ತೇವೆ. ಅದು ನಮಗೆ ಇಷ್ಟವಿರಲೀ ಇಲ್ಲದಿರಲೀ ಭೂತಾಯಿ ಬೆಳೆಯುವುದನ್ನು ನಿಲ್ಲಿಸಲಾರಳು.ಅಂದರೆ ವೈವಿಧ್ಯವೇ ಜೀವಲೋಕದ ಸರ್ವಸ್ವವಾಗಿದೆ. ಏಕವೆಂದಿಗೂ ಅನೇಕದಲ್ಲಿ ಕಾಣಿಸುತ್ತಲೇ ಇರುವುದೇ ಜಗದ ಜಾಣಿನ ಕತೆಯಾಗುತ್ತದೆ. 
ದೈವವು ತಾನೇ ಸಾಕ್ಷಿಯಾಗಿ ಪ್ರಕೃತಿಯನ್ನು ಮಾತೆಯಾಗಿಸಿ ಅವಳ ಮೂಲಕವಾಗಿಯೇ ಜಗದ ಜನಗಳಿಗೆ ಬಗೆಬಗೆಯ ಹೂ ಕಾಯಿ ಹಣ್ಣುಗಳನ್ನು , ಆಹಾರ ಪದಾರ್ಥಗಳನ್ನು ಮಾನವರಿಗೆ ನೀಡುತ್ತಿದ್ದಾನೆ. ವೈವಿಧ್ಯವೆ ಜಗದ ಶಕ್ತಿಯಾಗಿದೆ.

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...