ಶನಿವಾರ, ನವೆಂಬರ್ 30, 2013

ರಂಗಬೂಮಿಯಲ್ಲಿ ಜೆನ್ನಿ ಎಂದೇ ಗುರುತಿಸಲ್ಪಡುವ ಮತ್ತು ಈಚೆಗೆ ಮೈಸೂರು ರಂಗಾಯಣದ ನಿರ್ದೇಶಕರಾಗಿ ಸೂತ್ರಸಂಚಾಲನೆ ವಹಿಸಿಕೊಂಡ ಜನಾರ್ದನ ಅವರು 2013 ಅಕ್ಟೋಬರ್ 29 ರಂದು ಧಾರವಾಡಕ್ಕೆ ಭೆಟ್ಟಿ ಕೊಟ್ಟ ಸಂದರ್ಭದಲ್ಲಿ ಅವರ ಬಯಾಗ್ರಫಿಯನ್ನು ಸಂಗ್ರಹಿಸಿದೆ. ಅದನ್ನು ಫೇಸ್‍ಬುಕ್ ಆತ್ಮೀಯರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇಷ್ಟ ಆದರೆ ನನಗೂ 8762379911 ಪ್ರತಿಕ್ರಿಯಿಸಿ, ಜೆನ್ನಿ ಅವರನ್ನು ಮಾತನಾಡಿಸಬೇಕೆಂದರೆ ಇಲ್ಲಿಗೆ 9945780989 ಹಲೋ ಅನ್ನಿ

ಜೆನ್ನಿ ಎಂಬ ರಂಗಕರ್ಮಿಯ ಹೆಜ್ಜೆ ಗುರುತುಗಳು


ಪ್ರಸ್ತುತ ಮೈಸೂರು ರಂಗಾಯಣದ ನಿದೇಶಕರಾಗಿರುವ ಮತ್ತು ರಂಗಭೂಮಿಯಲ್ಲಿ ಜೆನ್ನಿ ಎಂದೇ ಪರಿಚಿತರಾಗಿರುವ 56 ರ ಹರೆಯದ ಹೆಚ್. ಜನಾರ್ಧನರವರು ಸುಮಾರು ಮೂರುವರೆ ದಶಕದಿಂದ ಕನ್ನಡ ರಂಗಭೂಮಿ ಹಾಗೂ ಭಾರತೀಯ ರಂಗಭೂಮಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ. ದಲಿತ ಚಳವಳಿ ಹಾಗೂ ಸಮುದಾಯ ರಂಗ ಚಳವಳಿಯ ಮೂಲಕ ರಂಗಪ್ರವೇಶ ಮಾಡಿದ ಇವರು ಸಾಮಾಜಿಕ ಅರಿವು ಹಾಗೂ ಬದಲಾವಣೆಗೆ ರಂಗಭೂಮಿ ಅಸ್ತ್ರವೆಂದು ನಂಬಿ ತಾತ್ವಿಕ ನೆಲೆಗಟ್ಟಿನಿಂದ ಬದ್ಧತಾಪೂರ್ಣ ರಂಗಚಟುವಟಿಕೆ ಹೆಸರಾಂತ ನಿರ್ದೇಶಕರಾಗಿ, ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ನಾಡಿನಾದ್ಯಂತ 'ಜನಮನದ ಜನ್ನಿ' ಎಂದೇ ಪ್ರಖ್ಯಾತರಾಗಿದ್ದಾರೆ. ಸಮಾಜಮುಖಿ ನಿಲುವಿನೊಂದಿಗೆ ಜನಮನದ ಜೀವನಾಡಿಯಾಗಿ ನಾಡಿನಾದ್ಯಂತ ತಮ್ಮ ಹಾಡುಗಳು,
ಜನಮನ್ನಣೆ ಗಳಿಸಿದ್ದಾರೆ.
ದೆಹಲಿ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ನಿರ್ದೇಶನದಲ್ಲಿ ಪರಿಣಿತಿ ಪದವಿ ಪಡೆದ ಇವರು ಮೈಸೂರಿನ ರೀಜನಲ್ ಕಾಲೇಜಿನ ಡೆಮಾನ್ಸ್‍ಟ್ರೇಷನ್ ಮಲ್ಟಿಪರ್ಪಸ್ ಶಾಲೆಯಲ್ಲಿ, ನಾಟಕ ಶಾಸ್ತ್ರದ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ರಂಗ ಪಯಣದಲ್ಲಿ ನಾಡಿನ ಸಮುದಾಯ ಮತ್ತು ಸಾಂಸ್ಕøತಿಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾವಿರಾರು ಹಳ್ಳಿಗಳನ್ನು ಸುತ್ತಿ, ಸಮುದಾಯದ ರಂಗ ಘಟಕಗಳನ್ನು ಕಟ್ಟಿ ಬೆಳೆಸಲು ದುಡಿದಿದ್ದಾರೆ.

ರಂಗ ಪಯಣ:

ಗಿರೀಶ್ ಕಾರ್ನಾಡರ 'ಹಯವದನ', ಬ್ರೆಕ್ಟ್‍ನ 'ತಾಯಿ', ತೇಜಸ್ವಿಯವರ 'ಕುಬಿ ಮತ್ತು ಇಯಾಲ', ಯು.ಆರ್. ಅನಂತಮೂರ್ತಿ ಅವರ 'ಸಂಸ್ಕಾರ', 'ಕತ್ತಲೆ ದಾರಿ ದೂರ', 'ಚೋರ ಚರಣದಾಸ', 'ಶಿಶುನಾಳ ಶರೀಫ', 'ಕುರಿ' ಮುಂತಾದ ನಾಟಕಗಳಲ್ಲದೇ ಕನ್ನಡ ನಾಡಿನಾದ್ಯಂತ ಬೀದಿನಾಟಕಗಳಲ್ಲಿ ಪತ್ತೆ ಸಂಗಪ್ಪ, ಬೆಲ್ಜಿಯಂತಹ ಇನ್ನೂ ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ.
ನಟನೆಯೊಂದಿಗೆ ನಿರ್ದೇಶಕರಾಗಿ ದೇವನೂರು ಮಹಾದೇವರ 'ಕುಸುಮಾಬಾಲೆ', ಡಾ. ಚಂದ್ರಶೇಖರ ಕಂಬಾರರ 'ತುಕ್ರನ ಕನಸು', ಲಂಕೇಶರ 'ಮುಟ್ಟಿಸಿಕೊಂಡವನು', ಚದುರಂಗರ 'ಬಿಂಬ' ಹಾಗೂ 'ಬಂಡೆಕೊಳಲು', ಬೇಂದ್ರೆಯವರ 'ಸಾಯೋ ಆಟ', ಕುವೆಂಪು ಅವರ ''ಜಲಗಾರ', ಹೆಚ್.ಎಸ್. ಶಿವಪ್ರಕಾಶ್‍ರ 'ಮಾದಾರಿ ಮಾದಯ್ಯ' ಮತ್ತು 'ಸಿಂಗಿರಾಜ ಸಂಪಾದನೆ', 'ಸಮಗಾರ ಭೀಮವ್ವ', ಸಿದ್ದಲಿಂಗಯ್ಯರವರ 'ಅಲ್ಲೇ ಕುಂತವರೇ', ಅಲ್ಲದೆ 'ಚಾರ್ವಾಕ', 'ಕಕೇಷಿಯನ್ ಚಾಕ್ ಸರ್ಕಲ್', 'ಬೋಲಾರಾಮನ ಜೀವ' ಮುಂತಾದ ಮಹತ್ತರ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಬೀದಿ ನಾಟಕದ ರೂವಾರಿ :
ಬೀದಿ ನಾಟಕ ಚಳವಳಿಯನ್ನು ಬೆಳೆಸುವಲ್ಲಿ ಪ್ರಮುಖರಾದ ಇವರು ನಾಡಿನಾದ್ಯಂತ ನಡೆದ ಸಮುದಾಯ ಜಾಥಾದ ಸಂಘಟಕರಲ್ಲೊಬ್ಬರಾಗಿ, ಮುಖ್ಯಪಾತ್ರದಾರರಾಗಿ ಸಾವಿರಾರು ಹಳ್ಳಿಗಳಲ್ಲಿ ಪ್ರದರ್ಶನ ನೀಡುವುದರ ಮೂಲಕ ಸಾಂಸ್ಕøತಿಕ ಪ್ರೇರಕರಾಗಿ ಕೆಲಸ ಮಾಡಿದ್ದಾರೆ. 'ಬೆಲ್ಜಿ', ಸೌಹಾರ್ದತೆ', 'ಎಚ್ಚರ', ಒಂದಾನೊಂದು ಊರು' 'ಗಾಂಧಿ ಹೇಳಿದ್ದು' 'ಆಶಯ', 'ಡಾಂಬರು ಬಂದದ್ದು', 'ಗುಮಾಸ್ತನ ಸಾವು', ಬೀದಿನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವರೇ ರಚಿಸಿ, ನಿರ್ದೇಶಿಸಿದ 'ಪತ್ರೆ ಸಂಗಪ್ಪನ ಕಗ್ಗೊಲೆ', 'ನರಗುಂದ ಬಂಡಾಯ', ಸ್ವಾತಂತ್ರ್ಯ ಅಂದು-ಇಂದು' ನಾಟಕಗಳು ನಾಡಿನಾದ್ಯಂತ ಪ್ರದರ್ಶನಗೊಂಡಿವೆ. ಇವರು ನಿರ್ದೇಶಿಸಿದ ಬೀದಿನಾಟಕಗಳು, ಕೊಲ್ಕತ್ತ, ದೆಹಲಿ, ಹೈದರಾಬಾದ್, ಮಧ್ಯಪ್ರದೇಶದ ಭೂಪಾಲ್‍ನ ಭಾರತ್‍ಭವನ್‍ನಲ್ಲಿ ಪ್ರದರ್ಶನಗೊಂಡು ಪ್ರಶಂಸೆಗೊಳಪಟ್ಟಿವೆ. ರಾಷ್ಟ್ರೀಯ ಬೀದಿನಾಟಕ ಉತ್ಸವಗಳಲ್ಲಿ ಪ್ರದರ್ಶನಗೊಂಡಿವೆ.
ಕಾವ್ಯರಂಗ ಪ್ರಯೋಗ :
ವಾಚಾನಾಭಿರುಚಿಗೆ ಮಾತ್ರ ಸೀಮಿತವಾಗಿದ್ದ ಕನ್ನಡ ಕಾವ್ಯ ಪರಂಪರೆಗೆ ರಂಗಭೂಮಿಯ ಆಯಾಮವನ್ನು ನೀಡಿದವರಲ್ಲಿ ಜನ್ನಿ ಪ್ರಮುಖರು. ದಿವಂಗತ ಕೀ.ರಂ. ನಾಗರಾಜು ಅವರ ಸಾರಥ್ಯದಲ್ಲಿ ಇವರ ಕಾವ್ಯರಂಗ ಪ್ರಯೋಗಗಳಾದ 'ಸಿಂಗಿರಾಜ ಸಂಪಾದನೆ', ಸಮಗಾರ ಭೀಮವ್ವ', 'ಅಲ್ಲೆಕುಂತವರೇ', 'ಕೊಲೆಯ ಹಿಂದಿನ ರಾತ್ರಿ', 'ಕತ್ತೆ ಮತ್ತು ಧರ್ಮ', 'ಕಲ್ಕಿ ಮತ್ತು ನಾಗಿ', ಪ್ರಯೋಗಗಳನ್ನು ಪರಿಣಾಮಕಾರಿಯಾಗಿ ಮಾಡಿದ್ದಾರೆ. ನೃತ್ಯ ರೂಪಕಗಳಾದ 'ಬಡಪಾಯಿ ಮಾದಪ್ಪ' 'ಈನೆಲ ಈಜಲ', 'ಇಷ್ಟುಬೇಗ ಮದುವೆ ಯಾಕವ್ವಾ', 'ಕೊಂದವರ್ಯಾರೂ', 'ಹಚ್ಚಬ್ಯಾಡ ಹಚ್ಚಬ್ಯಾಡವ್ವಾ' ಸಾಕ್ಷರತೆಯ ಸಾಧನವಾಗಿ ನಿರೂಪಿತವಾಗಿದೆ.
ರಂಗತಜ್ಞರ ಒಡನಾಟ :
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ರಂಗ ನಿರ್ದೇಶಕರುಗಳಾದ 'ಫ್ರಿಡ್ಜ್ ಬೆನಿವಡ್ಜ್;, 'ಬಿ.ವಿ. ಕಾರಂತ', 'ಬಾದಲ್ ಸರ್ಕಾರ್', 'ಪ್ರಸನ್ನ', 'ಎಂ.ಎಸ್. ಸತ್ಯು', 'ಸಿ.ಜಿ. ಕೃಷ್ಣಮೂರ್ತಿ', 'ರಣಜಿತ್ ಕಪೂರ್', 'ರೋಬಿನ್ ದಾಸ್', 'ಅಮಲ್ ಅಲ್ಲಾನ', 'ಬಿ.ಎಂ.ಷಾ', 'ಅಂಕೂರ್', 'ಅಲಕ್‍ನಂದ ಸಮ್ರತ್', 'ಗುರೂಜಿ ಪಣಿಕ್ಕರ್', 'ನರಸಿಂಹನ್', 'ಪ್ರೇಮ ಕಾರಂತ' ಮುಂತಾದ ದಿಗ್ಗಜರುಗಳ ಒಡನಾಟದಲ್ಲಿ ನಿರ್ದೇಶಕ, ಸಹನಿರ್ದೇಶಕ, ನಟ, ಸಂಘಟಕರಾಗಿ ಕೆಲಸ ಮಾಡಿ ಅನುಭವ ಪಡೆದ ಇವರು ಪ್ರಬುದ್ಧ ನಾಟಕಗಳನ್ನು ನೀಡಿರುವುದಲ್ಲದೇ ರಾಷ್ಟ್ರಮಟ್ಟದ ರಂಗಮೇಳಗಳು, ರಂಗಸಂವಾದಗಳು ಅಲ್ಲದೇ ನಾಟಕೋತ್ಸವಗಳಲ್ಲಿ ಭಾಗವಹಿಸಿದ್ದಾರೆ.

ರಂಗಸಂಘಟಕ :
ನಾಡಿನಾದ್ಯಂತ ಅನೇಕ ರಂಗಶಿಬಿರಗಳನ್ನು, ನಾಟಕಗಳನ್ನು ರಾಜ್ಯದ ವಿವಿಧ ಅಕಾಡೆಮಿ ಮತ್ತು ಸಾಂಸ್ಕøತಿಕ ತಂಡಗಳಿಗಾಗಿ ನಾಟಕ ನಿರ್ದೇಶನ ಮಾಡಿದ್ದಾರೆ. ಬೀದರ್ ಜಿಲ್ಲೆಯಿಂದ ಹಿಡಿದು ಕೋಲಾರ ಜಿಲ್ಲೆಯವರೆಗೆ ಸಂಚರಿಸಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ರಾಜ್ಯಮಟ್ಟದಲ್ಲಿ ನಡೆದ 'ಹೊಸ ಮೌಲ್ಯಗಳತ್ತ ಸಮುದಾಯ ಜಾಥಾ' (1979-80) ಮತ್ತು ರೈತನತ್ತ ಜಾಥಾ (1980-81) ನಟನಾಗಿ, ನಿರ್ದೇಶಕನಾಗಿ, ಸಂಘಟಕನಾಗಿ ಆಯೋಜನೆ ಮಾಡಿದ್ದಾರೆ.

ಗಾಯಕ, ಸಂಗೀತ ನಿರ್ದೇಶಕ :
ರಂಗ ಸಂಗೀತ ನಿರ್ದೇಶಕರಲ್ಲಿ ಪ್ರಮುಖವಾದ ಇವರು ಈವರೆವಿಗೂ 'ಸೂರ್ಯ ಶಿಕಾರಿ', 'ಧರ್ಮಪುರಿಯ ದೇವದಾಸಿ', 'ದ್ಯಾವನೂರು', 'ಮನೆ', 'ಬಡಪಾಯಿ ಮಾದಪ್ಪ', 'ಚೆ ಸವಾರ್', 'ಪುಂಟೀಲ', 'ಜೋಗತಿ', 'ತಷ್ಕರ', 'ಜಸ್ಮಾ ಓಡನ್', 'ಕೆರೆಗೆ ಹಾರ', 'ಅವ್ವಾ' ನಾಟಕಗಳಿಗೆ ಸಂಗೀತ ನಿರ್ದೇಶನಮಾಡಿದ್ದಾರೆ. ಅಲ್ಲದೇ ರಂಗಗೀತೆಗಳು, ಮಹಿಳೆ ಮತ್ತು ಮಕ್ಕಳು, ಅನಕ್ಷರಸ್ಥರು ಕಲಿಯುವಂತೆ ಪ್ರೇರೇಪಿಸುವ ನವ ಸಾಕ್ಷರಗೀತೆಗಳು, ಪರಿಸರ ಪ್ರಜ್ಞೆ ಮೂಡಿಸುವ ಅನೇಕ ಧ್ವನಿ ಸುರುಳಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. 'ಮನುಕುಲದ ಹಾಡು', 'ತಾಯಿ ಹೊಕ್ಕಳ ಹೂ', 'ಸಾವಿರಾರು ನದಿಗಳು', 'ಅರಳದ ಮೊಗ್ಗುಗಳು', 'ಮುಂಜಾನೆ', 'ನೀಲಿತಾರೆ', 'ಕೆಂಪುಸೂರ್ಯ', 'ಕೇಳವ್ವ ತಾಯಿ', 'ಹಾಡಲ್ಲ ನನ್ನ ಒಡಲುರಿ', 'ಸಾಕ್ಷರ ಹೆಜ್ಜೆ', 'ಬುದ್ಧ ವಂದನೆ', 'ಕಾಡು ಮಲ್ಲಿಗೆ', 'ಎಲ್ಲಿದ್ದವೋ ಕನಸುಗಳು', 'ಬನದ ಹಾಡು', 'ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ', 'ನನ್ನ ಜನಗಳು', 'ಧ್ವನಿ ಸುರುಳಿಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಜನಪರ ಗೀತೆಗಳ ಚಳುವಳಿಯ ಮಂಚೂಣಿಯಲ್ಲಿ ಕೆಲಸ ಮಾಡಿರುವ ಜನ್ನಿಯವರು ಬಸವಣ್ಣನ ವಚನಗಳನ್ನಾಧರಿಸಿದ 'ಕೂಡಲ ಸಂಗಮ' ಧ್ವನಿ ಸುರುಳಿಯಲ್ಲಿ ಪ್ರಮುಖ ಗಾಯಕರಾಗಿ ಹಾಡಿದ್ದಾರೆ. ಸಿ. ಅಶ್ವಥ್, ಬಿ.ವಿ. ಕಾರಂತ, ವಿ. ಮನೋಹರ್, ಹಂಸಲೇಖ ನಿರ್ದೇಶನದಲ್ಲಿ ಹಾಡಿದ್ದಾರೆ.

ಬೆಳ್ಳಿತೆರೆಯಲ್ಲಿ :
'ಬರ' ಚಿತ್ರದ ಮೂಲಕ ಚಲನ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಇವರು 'ಮತದಾನ', 'ಆಮಾಸ', 'ಅಆಇಈ', 'ದುನಿಯಾ', 'ಪರಿ', 'ಮಾತಾಡ್ ಮಾತಾಡ್ ಮಲ್ಲಿಗೆ', 'ಸಿಂಗಾರವ್ವ ಅರಮನೆ', 'ನೋಡು ಬಾ ನಮ್ಮೂರ' ಚಿತ್ರಗಳಲ್ಲಿ ಹಾಡಿದ್ದಾರೆ. 'ನೋಡು ಬಾ ನಮ್ಮೂರ' ಚಿತ್ರಕ್ಕಾಗಿ ವಿಶೇಷ ಹಿನ್ನಲೆ ಗಾಯನಕ್ಕಾಗಿ 'ರಾಜ್ಯ ಪ್ರಶಸ್ತಿ'ಯನ್ನು ಪಡೆದಿದ್ದಾರೆ. 'ನೀತಿ ಚಕ್ರ', 'ಓ ನನ್ನ ಚೇತನ', 'ಕಾಡಿನ ಮಕ್ಕಳು', 'ನೀನೆಲ್ಲಿರುವೆ' ಮತ್ತು 'ಕ್ರೈಂ-ಟೈಂ' ಟಿವಿ ಧಾರವಾಹಿಗಳಿಗಾಗಿ ಸಂಗೀತ ನಿರ್ದೇಶನ ಮಾಡಿ ಶೀರ್ಷಿಕೆ ಗೀತೆ ಹಾಡಿದ್ದಾರೆ.

ನಾಟಕ ಕರ್ನಾಟಕ ರಂಗಾಯಣ :
ನಾಟಕ ಕರ್ನಾಟಕ ರಂಗಾಯಣ ವೃತ್ತಿ ಸಂಸ್ಥೆಯ ಪ್ರಾರಂಭಕ್ಕೆ ಪೂರ್ವಭಾವೀ ಕಾರ್ಯದಲ್ಲೆ ಬಿ.ವಿ. ಕಾರಂತರೊಂದಿಗೆ ದುಡಿದಿದ್ದಾರೆ. ರಂಗಾಯಣದ ಕಲಾವಿದರ ಆಯ್ಕೆಯ ಸಮಿತಿಯಲ್ಲಿ ಸದಸ್ಯರಾಗಿ ರಂಗಾಯಣ ರಂಗಸಂಸ್ಥೆಯ ರೂಪುರೇಷೆಗಳನ್ನು ಅದಕ್ಕೆ ರಂಗಸ್ವರೂಪ ಕೊಡಲು ಕಾರಂತರೊಂದಿಗೆ ಪ್ರತಿ ಹಂತದಲ್ಲೂ ಕೆಲಸ ಮಾಡಿ ರಂಗಾಯಣ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ.

ಸಾಕ್ಷರತಾ ಆಂದೋಲನ :
ಕರ್ನಾಟಕದ ಸಾಕ್ಷರತಾ ಆಂದೋಲನಕ್ಕೆ ಸಾಂಸ್ಕøತಿಕ ಆಯಾಮ ಕೊಟ್ಟವರಲ್ಲಿ ಜನ್ನಿ ಪ್ರಮುಖರಾಗಿದ್ದಾರೆ. ಸಾಕ್ಷರತಾ ಆಂದೋಲನ ಯಶಸ್ಸಿಗಾಗಿ ಕಲಿಕೆಯ ವಾತಾವರಣ ನಿರ್ಮಾಣ ಮಾಡುವತ್ತ ನೂರಾರು ಬೀದಿ ನಾಟಕ ತಂಡಗಳಿಗೆ ತರಬೇತಿ ನೀಡಿ ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಸಾಕ್ಷರತಾ ವಾತಾವರಣ ನಿರ್ಮಾಣದ ರಾಜ್ಯ ಸಂಯೋಜಕರಾಗಿ ಪಯಣಿಸಿದ್ದಾರೆ.

ಜನಮನ ಸಾಂಸ್ಕøತಿಕ ಸಂಘಟನೆ :
ಎರಡೂವರೆ ದಶಕಗಳಿಂದ ನಾಡಿನಾದ್ಯಂತ ಹೆಸರುವಾಸಿಯಾಗಿರುವ ಮೈಸೂರಿನ ರಂಗ ಸಾಂಸ್ಕøತಿಕ ಸಂಘಟನೆಯಾದ ಜನಮನದೊಂದಿಗೆ ಕೆಲಸ ಮಾಡುತ್ತಿರುವ ಇವರು ನೂರಾರು ಯುವಕ ಯುವತಿಯರನ್ನು ರಂಗಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಕಾರ್ಯಕ್ರಮಗಳನ್ನು ರೂಪಿಸಿ, ಅವರಲ್ಲಿ ಸಾಮಾಜಿಕ ಹಾಗೂ ಸಾಂಸ್ಕøತಿಕ ಅರಿವು, ಬದ್ಧತೆಯನ್ನು ಮೂಡಿಸುವಲ್ಲಿ ಕ್ರಿಯಾಶೀಲರಾಗಿದ್ದಾರೆ. ಅನೇಕ ರಂಗಸಂಸ್ಥೆಗಳಿಗೆ ಸಲಹೆಗಾರರಾಗಿ ಸಾಮಾಜಿಕ ಜವಾಬ್ದಾರಿ ಹೊತ್ತು ವೃತ್ತಿ ಪರತೆಯಿಂದ ಕ್ರಿಯಾಶೀಲಗೊಳ್ಳುವಂತೆ ಪ್ರೇರಣೆಯಾಗಿದ್ದಾರೆ. ಇಂದಿಗೂ ನಿರಂತರವಾಗಿ ರಂಗಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಅವಕಾಶವಂಚಿತ ಪ್ರತಿಭಾವಂತ ಗ್ರಾಮೀಣ ಹಿನ್ನಲೆಯ ಯುವ ಜನರಿಗೆ ರಂಗತರಬೇತಿ ಶಿಬಿರಗಳು, ರಂಗಸಂವಾದಗಳು, ನಾಟಕ ಉತ್ಸವಗಳನ್ನು ಮಾಡುವುದರ ಮೂಲಕ ಅವರಲ್ಲಿ ಸಾಮಾಜಿಕ ಸಾಂಸ್ಕøತಿಕ ಅರಿವು ಮೂಡಿಸುವುದರ ಜೊತೆಗೆ ರಂಗ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತಹ 'ಮನುಜಮತ-ವಿಶ್ವಪಥ', 'ಸರ್ವಜನಾಂಗದ ಶಾಂತಿಯ ತೋಟ', 'ಕರುಣಾಳು ಬಾ ಬೆಳಕೆ' ಕಾರ್ಯಕ್ರಮಗಳು ಯುಜನರಿಗೆ ರಂಗವೇದಿಕೆಯಾಗಿ ಮೂಡಿ ನಾಡಿಗೆ ಮಾದರಿಯಾಗಿದೆ. ಈ ಕಾರ್ಯಕ್ರಮಗಳು ಸಮಾಜದಲ್ಲಿ ಜಾತ್ಯಾತೀತ ಮನೋಭಾವ, ಸೌಹಾರ್ದ ಸಮಾನತಾ ತತ್ವಗಳನ್ನು, ಸಹಬಾಳ್ವೆಯ ಬದುಕನ್ನು ಕಟ್ಟುವ ರಂಗ ಕ್ರಿಯೆಯಾಗಿದೆ. ಪ್ರಖ್ಯಾತ ಕಲಾವಿದರ ಸಾಂಗತ್ಯದಲ್ಲಿ ಜನಪದ, ಜನಪರ, ತತ್ವಪದಗಳ ಹಾಡಿನ ತಂಡವು ನಿರಂತರವಾಗಿ ನಾಡಿನಾದ್ಯಂತ ಕಾರ್ಯಕ್ರಮಗಳನ್ನು ನೀಡುತ್ತಾ ಸೌಹಾರ್ದತೆಯನ್ನು ಬಿತ್ತುವ ನಿಟ್ಟಿನಲ್ಲಿ ಕ್ರಿಯಾಶೀಲಗೊಂಡಿದ್ದಾರೆ.

ವಿದೇಶದಲ್ಲಿ ಕನ್ನಡ ಜನಪದ :
2006 ರಲ್ಲಿ ಅಮೆರಿಕಾದ 'ಬಾಲ್ಟಿ ಮೋರ್'ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ರಂಗಭೂಮಿ ಹಾಗೂ ಜನಪದ ಗಾಯಕರಾಗಿ ಭಾಗವಹಿಸಿ ಪ್ರಬುದ್ಧ ಕಾರ್ಯಕ್ರಮ ನೀಡಿದ್ದಲ್ಲದೇ 'ವಾಷಿಂಗ್‍ಟನ್', ನ್ಯೂಯಾರ್ಕ್', ನ್ಯೂ ಜರ್ಸಿ', 'ಅಟ್ಲಾಂಟ', 'ಕನೆಕ್ಟಿಕಟ್' ನಗರಗಳಲ್ಲಿ ಜನಪದ ಕಾರ್ಯಕ್ರಮಗಳನ್ನು ನೀಡಿ ಜನಮನ್ನಣೆ ಗಳಿಸಿದ್ದಾರೆ. 2010 ರಲ್ಲಿ 'ಲಾಸ್‍ಏಂಜಲಿಸ್'ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿ ಜನಪದ ಗಾಯನದ ಮೂಲಕ ಜನಮನ ಗೆದ್ದಿದ್ದಾರೆ. 'ಕ್ಯಾಲಿಪೋರ್ನಿಯಾ', 'ಸ್ಯಾನ್‍ಪ್ರಾನ್ಸಿಸ್ಕೋ', 'ಸ್ಯಾನ್‍ಹೌಸೆ' ಸ್ಥಳಗಳಲ್ಲಿ ಜನಮೆಚ್ಚುಗೆಯ ಜನಪದ ಕಾರ್ಯಕ್ರಮಗಳನ್ನು ನೀಡಿ ನಾಡಿಗೆ ಗೌರವ ತಂದಿದ್ದಾರೆ.
ಪ್ರಶಸ್ತಿಗಳು :
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪುರಸ್ಕಾರ ಸನ್ಮಾನಗಳಿಗೆ ಭಾಜನವಾಗಿರುವ ಜನ್ನಿಯವರು ಅನೇಕ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಚಲನಚಿತ್ರ ಹಿನ್ನಲೆ ಗಾಯನ ಪ್ರಶಸ್ತಿ, ಕರ್ನಾಟಕ ಸರ್ಕಾರದ ಅಂಬೇಡ್ಕರ್ ಪ್ರಶಸ್ತಿ, ಮಂಡ್ಯದ ಕೆ.ವಿ. ಶಂಕರೇಗೌಡ ಪ್ರಶಸ್ತಿ, ರೋಟರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಂಗಶ್ರೀ ಪ್ರಶಸ್ತಿಗಳು ಅವರ ಹೆಗ್ಗಳಿಕೆ.

-ರಾಜೇಂದ್ರ ಪಾಟೀಲ

ಜೆನ್ನಿ ವಿಳಾಸ: ಜನಾರ್ಧನ .ಹೆಚ್ (ಜನ್ನಿ), ನಂ.28, ರೀಜನಲ್ ಕಾಲೇಜು ಬಡಾವಣೆ, ಬೋಗಾಧಿ 2ನೇ ಹಂತ, ಪ್ರಶಾಂತನಗರ, ಮೈಸೂರು - 570026.


ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...