ಶನಿವಾರ, ನವೆಂಬರ್ 16, 2013

kannada tatva padagalu

                           
   
                                                    ಕನ್ನಡ ತತ್ತ್ವಪದ ಸಾಹಿತ್ಯ  

               
                                                         - ಡಾ.ಪ್ರಕಾಶ ಗ. ಖಾಡೆ

       ಕನ್ನಡ ಸಾಹಿತ್ಯದಲ್ಲಿ ಹದಿನಾರರಿಂದ ಹತ್ತೊಂಬತ್ತನೆಯ ಶತಮಾನದವರೆಗೆ ಸಮೃದ್ಧವಾಗಿ ಬೆಳೆದುಕೊಂಡು ಬಂದ ತತ್ತ್ವಪದ ಸಾಹಿತ್ಯವು ಶರಣರ ವಚನ, ದಾಸರ ಕೀರ್ತನೆಗಳಂತೆ ಕಂಡರೂ ಜನಸಾಮಾನ್ಯರ ನಾಲಗೆಯ ಮೇಲೆ ಸುಲಭವಾಗಿ ಹರಿದಾಡಿ ಭಜನೆ ಮೊದಲಾದ ಸಂದರ್ಭಗಳ ಮೂಲಕ ಹೆಚ್ಚು ಜನಮುಖಿಯಾಯಿತು.. ತತ್ತ್ವಪದ ಸಾಹಿತ್ಯವು ಶಿಷ್ಟ ಹಾಗೂ ಜನಪದ ಎರಡೂ ಸಾಹಿತ್ಯ ಪರಂಪರೆಗೆ ಸೇರಿದ್ದಾಗಿದೆ. ಧರ್ಮ ಸಮನ್ವಯ, ಭಾಷಾ ಸಮನ್ವಯ ಪ್ರಾದೇಶಿಕ ಸಮನ್ವಯವನ್ನು ಸಾಧಿಸುವುದರೊಂದಿಗೆ ತತ್ತ್ವಪದವು ಸಾಹಿತ್ಯ ಸಮನ್ವಯವನ್ನು ಸಾಧಿಸಿದೆ. ಇದು ತತ್ತ್ವ ಪ್ರೌಢವಾದುದೂ, ಶಿಷ್ಟ ಪರಂಪರೆಗೆ ಸೇರಿದುದು ಆದರೆ, ಇದರ ಅಭಿವ್ಯಕ್ತಿಯ ಕ್ರಮ ಜನಪದವಾಗಿದೆ.
   ಮೌಖಿಕ ಪರಂಪರೆಯ ತತ್ತ್ವಪದ ಸಾಹಿತ್ಯವನ್ನು ಜನಸಮುದಾಯಗಳು ತಮ್ಮ ಒಡಲ ಕೂಸಿನಂತೆ ಜತನ ಮಾಡಿಕೊಂಡು ಬಂದರು. ತತ್ತ್ವಪದಕಾರರಾಗಲಿ, ಸೂಫಿ ಸಂತರಾಗಲಿ, ಜನಸಾಮಾನ್ಯರ, ಕೆಳವರ್ಗದವರ ಜತೆ ಬೆರತು ಜಾತಿ ಮತವನ್ನು ಮೀರಿ ನಿಲ್ಲುವ ಶಕ್ತಿಯನ್ನು ಸೃಷ್ಟಿಸಿದರು. ಎಚ್. ಎಸ್. ಶಿವಪ್ರಕಾಶ್ ಅವರು ಇದನ್ನೇ ‘ಎಲ್ಲ ಜಾತಿಯ ಮರಗಳು ಕಾಡು’ ಎಂದು ಕರೆದು ಗ್ರಾಮೀಣ ಸೊಗಡಿನ ಬಂಧುತ್ವ, ಬಾಂಧವ್ಯಕ್ಕೆ ಈ ಕಾವ್ಯದ ಅಪ್ಪಟ ದೇಸಿತನವನ್ನು ಪ್ರಕಟಿಸಿದರು.
ಭಜನಾ ಸಮುದಾಯಗಳು :
     ಭಜನೆಗಳ ಮೂಲಕ ತತ್ತ್ವಪದಗಳು ಬಳಕೆಯಾಗುತ್ತ ಉಳಿದುಕೊಂಡು ಬಂದವು. ನಮ್ಮ ಗ್ರಾಮಗಳಲ್ಲಿ ‘ಭಜನೆ ಹಚ್ಚುವ’ ಸಂದರ್ಭಗಳಿಗೆ ಇಂಥದೇ ಕಾರಣ ಎಂಬುದಿಲ್ಲ. ಅಮವಾಸ್ಯೆ, ಹುಣ್ಣಿಮೆ, ಹಬ್ಬ ಹರಿದಿನ, ಸಾವು, ಸಂಭ್ರಮ, ಕಾರ್ತಿಕ, ಕಾರಣಿಕ- ಹೀಗೆ ಮನೆ, ಮಠ, ಗುಡಿ ಗುಂಡಾರವೆನ್ನದೆ ಎಲ್ಲಿ ಬೇಕಾದಲ್ಲಿ ಹಾಡುವುದು ಇದೆ. ಶುಭ ಕಾರ್ಯಗಳಿಗೆ ಹೆಚ್ಚು ಬಳಕೆಯಾಗುವ ಈ ಭಜನೆ ಹಳ್ಳಿಗರ ಜ್ಞಾನ ಕ್ಷೇತ್ರವನ್ನು ವಿಸ್ತರಿಸುವ ಮತ್ತು ಬದುಕು ಹಸನುಗೊಳಿಸುವ ದಿಸೆಯಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಭಜನಾ ಸಮುದಾಯಗಳು ತತ್ತ್ವಪದಗಳ ವಾಹಕರಾಗಿ ಪರಂಪರೆಯಲ್ಲಿ ಬೆಳೆದುಕೊಂಡು ಬಂದವು. ಭಜನೆಕಾರರ ಮೂಲಕ ಮೌಖಿಕವಾಗಿ ಉಳಿದುಕೊಂಡು ಬಂದ ಈ ಪದಗಳು ವಿವಿಧ ನೆಲೆಗಳಲ್ಲಿ ಭಿನ್ನರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ‘ಬೇರೆ ಬೇರೆ ಪ್ರದೇಶದ ಭಜನಾ ಮೇಳಗಳು ತಮಗೆ ಹತ್ತಿರದ ಸ್ಥಳೀಯ ತತ್ತ್ವಪದಕಾರರ ಹಾಡುಗಳನ್ನು ಬಳಸಿಕೊಂಡು ಹಾಡುತ್ತಿದ್ದವು. ಇಂಥ ಭಜನಾ ಮೇಳಗಳು ಸೊಲ್ಲಾಪುರ, ಪಂಡರಾಪುರ, ಕಲಬುರ್ಗಿ, ಗಾಣಾಗಾಪುರ, ಶ್ರೀಶೈಲ, ಹಂಪಿ, ಮಂತ್ರಾಲಯ, ಮುಂತಾದ ಪ್ರಸಿದ್ಧ ದೇವರ ದರ್ಶನಕ್ಕೆ ಪ್ರಯಾಣಿಸುತ್ತಿದ್ದವು. ಇಂಥ ಸಂದರ್ಭದಲ್ಲಿ ಬೇರೆ ಭಾಷೆಯ ಹಾಡುಗಳು ಪ್ರಿಯವಾದರೆ ಅಂಥ ಹಾಡುಗಳನ್ನು ತಮ್ಮ ಭಾಷೆಗೆ ಪರಿವರ್ತಿಸಿಕೊಂಡು ಹಾಡುತ್ತಿದ್ದವು” ಎಂಬುದನ್ನು ಡಾ.ಅಮರೇಶ ನುಗಡೋಣಿ ಗುರುತಿಸಿದ್ದಾರೆ.
ತತ್ತ್ವಪದಗಳು ಕನ್ನಡದಲ್ಲಿ ಬಗೆ ಬಗೆಯ ಹೆಸರುಗಳಿಂದ ಬೆಳೆದುಕೊಂಡು ಬಂದಿವೆ. ಪರಮಾತ್ಮನ ಬಗೆಗಿನ ಅನುಭಾವ ಈ ಪದಗಳಲ್ಲಿ ವ್ಯಕ್ತಗೊಂಡುದರಿಂದ ಇದಕ್ಕೆ ಅನುಭಾವ ಪದಗಳೆಂದೂ, ಇವನ್ನು ಏಕತಾರಿಯಂತಹ ವಾದ್ಯದೊಂದಿಗೆ ಸ್ವರವೆತ್ತಿ ಹಾಡುವುದರಿಂದ ಇವಕ್ಕೆ ಸ್ವರ ವಚನಗಳೆಂದೂ, ಅಂತರಂಗದ ಅರಿವಿನ ಮೂಲಭೂತ ತತ್ತ್ವಗಳನ್ನು, ಆಧ್ಯಾತ್ಮಿಕ ತತ್ತ್ವಗಳನ್ನು ಇವು ಒಳಗೊಂಡಿರುವುದರಿಂದ ಇವಕ್ಕೆ ತತ್ತ್ವಪದಗಳೆಂದೂ, ಇವನ್ನು ಜನಸಾಮಾನ್ಯರು ಭಜನಾ ಸಂದರ್ಭದಲ್ಲಿ ಹಾಡುವುದರಿಂದ ಭಜನೆಯ ಪದಗಳೆಂದೂ ಕರೆದುಕೊಂಡು ಬರಲಾಯಿತು.

ತತ್ವಪದ ಸಾಹಿತ್ಯ ಪರಂಪರೆ :
     ತತ್ತ್ವಪದ ಪರಂಪರೆಯಲ್ಲಿ ಮುಪ್ಪಿನ ಷಡಕ್ಷರಿ (1500), ಚಿದಾನಂದ ಅವಧೂತರು (1750), ರಾಮಪುರದ ಬಕ್ಕಪ್ಪ (1750), ಸಾರವಾಡ ಚಿಕ್ಕಪ್ಪಯ್ಯ (1758), ಹಾಗಲವಾಡಿ ಮದ್ವೀರೆ ಸ್ವಾಮಿಗಳು (1750), ಮೈಲಾರದ ಬಸವಲಿಂಗ ಶರಣರು (1700), ನಿಂಬರಗಿ ಮಹಾರಾಜರು (1750), ಶಂಕರಾನಂದರು (1750), ನೀರಲಕೇರಿ ಪಂಚಾಕ್ಷರಿ (1800), ಕೂಡಲೂರು ಬಸವಲಿಂಗ ಶರಣರು (1800), ಸರ್ಪಭೂಷಣ ಶಿವಯೋಗಿ (1825), ಬಾಲಲೀಲಾ ಮಹಾಂತ ಶರಣರು (1850), ಶಿಶುನಾಳ ಶರೀಫ್ ಸಾಹೇಬ (1840), ಕಡಕೋಳ ಮಡಿವಾಳಪ್ಪ (1850), ಮೊದಲಾದವರು ಪ್ರಮುಖರಾಗಿದ್ದಾರೆ.
     ಈ ಪರಂಪರೆಯಲ್ಲಿ ಮುಸ್ಲಿಂ ತತ್ತ್ವಪದಕಾರರ ಸಾಧನೆ ಗಮನಾರ್ಹವಾದುದು. ಕರ್ನಾಟಕದ ಉತ್ತರ ಭಾಗದಲ್ಲಿ ದೀರ್ಘಕಾಲ ‘ಹಿಂದೂ-ಮುಸ್ಲಿಂ’ ಎರಡೂ ಸಮುದಾಯಗಳು ಕೂಡಿ ಬಾಳುತ್ತ ಬಂದಿವೆ. ಎರಡು ಸಂಸ್ಕøತಿಗಳ ನಡುವೆ ಸಂಘರ್ಷ ಸಾಮರಸ್ಯಗಳು ಏರ್ಪಟ್ಟಿವೆ. ಮುಖ್ಯವಾಗಿ ಮುಸ್ಲಿಂ ತತ್ತ್ವಪದಕಾರರು ಎರಡು ಸಂಸ್ಕøತಿಗಳ ಸಾಮರಸ್ಯ ಮತ್ತು ಬಾಂಧವ್ಯಕ್ಕೆ ಅಪರೂಪದ ಕೊಡುಗೆ ನೀಡಿದರು. ಚನ್ನೂರ ಜಲಾಲಸಾಬ (1700), ಮೇಟ್ನಳ್ಳಿ ಹಸನಸಾಬ (1855), ಕೋಹಿನೂರ ಹಸನ (1875), ದೇಗಾವಿ ಹಜರತ್ (1917), ಮಂಜಿಲಾನ ಖಾದರಸಾಬ (1930), ಅರವಲಿ ಬಿಜಲಿ ವಸ್ತಾದಿ (1930), ಸಾವಳಗಿ ಮಹಮ್ಮದಸಾಬ (1917), ಸಾಹಿಬಣ್ಣ ತಾತಾ, ಸಾಲಗುಂದಿ ಗುರು ಖಾದರಿ ಮೊದಲಾದವರು ಹೆಸರಾಗಿದ್ದಾರೆ. ಮುಸ್ಲಿಂ ಪ್ರಭುತ್ವವಾದಿಗಳ ಆಳ್ವಿಕೆಯ ಅಧಿಕೃತ ಭಾಷೆ ಉರ್ದು ಇದ್ದುದರಿಂದ ಕನ್ನಡ ಸಾಹಿತ್ಯ ರಚನೆಗೆ ತೊಂದರೆಯಾಯಿತೆಂದು ಆಧುನಿಕರ ಹೇಳಿಕೆಗೆ ಅನುವು ಸಿಗದಂತೆ ಈ ಮುಸ್ಲಿಮ್ ತತ್ತ್ವಪದಕಾರರು ಕನ್ನಡದಲ್ಲಿ ತತ್ತ್ವಪದಗಳನ್ನು ಹಾಡಿರುವುದು ವಿಶೇಷವಾಗಿದೆ.
 
   ಗ್ರಾಮ್ಯವನ್ನು ಬಳಸಿ ಈ ತತ್ತ್ವಪದಕಾರರು ತಮ್ಮ ಅಂತರಂಗದ ಸೂಕ್ಷ್ಮ ಭಾವನೆಗಳನ್ನು, ಆರೋಗ್ಯಕರ ಪ್ರೇಮವನ್ನು, ಬ್ರಿಟಿಷರ ದಬ್ಬಾಳಿಕೆ ಮತ್ತು ‘ಕ್ರೂರ’ ಯಂತ್ರ ನಾಗರಿಕತೆಯ ಸಂದರ್ಭದಲ್ಲಿ ಅಭಿವ್ಯಕ್ತಿಸಿದರು. ತಮ್ಮ ಸುತ್ತಣ ಸಮುದಾಯದ ಸಂದರ್ಭಗಳಲ್ಲಿ ನಾಶಗೊಳ್ಳುತ್ತಿದ್ದ ಮನುಷ್ಯ ಸಂಬಂಧಗಳನ್ನು ಕುರಿತು ಅವರು ಪದ ಕಟ್ಟಿ ಹಾಡಿದರು.
ಗಡಗಿ ತೊಳೆದು ಅಡಗಿ ಮಾಡಮ್ಮ | ತನುವೆಂಬ
ಗಡಗಿ ತೊಳೆದು ಅಡಗಿ ಮಾಡಮ್ಮ

ಅನುಭಾವದಡುಗೆಯ ಮಾಡಿ ಎಡಿಯ ಮಾಡಮ್ಮ
ದೇವರಿಗೆಡಿಯ ಮಾಡಿ ಗಂಡಗುಣಿಸಮ್ಮಾ


ಕರ್ಮವೆಂಬ ಜೋಳ ಬೀಸವ್ವ | ನೀ
ಧರ್ಮ ಜರಡಿಯಿಂದ ಹಿಟ್ಟ ಸೋಸವ್ವ

ನಿರ್ಮಳಾತ್ಮ ನೀರ ಹಾಕವ್ವಾ | ನೀ
ನೇಮದಿಂದ ಕಣಕ ನಾದವ್ವಾ
   
    ಹೀಗೆ ಸಾಗುವ ಕಡಕೋಳ ಮಡಿವಾಳಪ್ಪನವರ ತತ್ತ್ವಪದದಲ್ಲಿ  ದೇಹವನ್ನು ಗಡಿಗೆಗೆ, ಅನುಭಾವವನ್ನು ಅಡಿಗೆಗೆ ಹೋಲಿಸಿದ್ದಾರೆ. ಅನುಭಾವದಡಿಗೆಯನ್ನು ಮಾಡಲು ಕರ್ಮವೆಂಬ ಜೋಳ ಬೀಸಿ ಧರ್ಮವೆಂಬ ಜರಡಿಯಿಂದ ಹಿಟ್ಟು ಸಾರಣಿಸಿ ಅದರಲ್ಲಿ ನಿರ್ಮಳಾತ್ಮ ನೀರು ಹಾಕಿ ನಾದಬೇಕು., ನಾದಿ ಸಂಚಿತ ಕರ್ಮದ ಹಂಚನ್ನು ತೊಳೆದು ಹಂಚಿಕಿಂದ ಜ್ಞಾನದ ಅಗ್ನಿ ಉರಿಸಿ ಸಂಚಿನಿಂದ ಪರರೊಟ್ಟಿ ಬೇಯಿಸಬೇಕೆನ್ನುವಲ್ಲಿ ಅರ್ಥಪೂರ್ಣ ಅನುಭಾವವನ್ನು ಪ್ರಕಟಿಸುತ್ತಾರೆ.
     ಶಿಶುನಾಳ ಶರೀಫ್ ಸಾಹೇಬರ ತತ್ತ್ವಪದಗಳು ಕನ್ನಡದಲ್ಲಿ ಜನಪ್ರಿಯತೆಯಿಂದ ಮೆರೆಯುತ್ತಿವೆ. ಈ ಜನಪ್ರಿಯತೆಗೆ ಕಾರಣ ಮೂಲದಲ್ಲಿ ಮೌಖಿಕ ಕಾವ್ಯವಾಗಿದ್ದ ಈ ಪದಗಳು ಪಠ್ಯ ರಚನೆಗಳಾಗಿ ಉಳಿದುಕೊಂಡಾಗ ನಮ್ಮ ಕನ್ನಡದ ಪ್ರಸಿದ್ಧ ಗಾಯಕರು ಅವನ್ನು ಹಾಡಿ ತೋರಿಸಿದಾಗ ಶರೀಫ್‍ರ ಕಾವ್ಯ ಕೀರ್ತಿ ಬೆಳಗಿತು. ‘ಸದ್ಗುರು ಸಾಕಿದ ಮದ್ದಾನೆ’ ಎಂದು ಹೆಸರಾದ ಶರೀಫ್‍ರಿಗೆ ಗೋವಿಂದ ಭಟ್ಟರು ಗುರುಗಳು. ಶರೀಫ್‍ರ ತತ್ತ್ವಪದಗಳಲ್ಲಿ ಜೀವನ ಮತ್ತು ಆಧ್ಯಾತ್ಮ ಹಾಸು ಹೊಕ್ಕಾಗಿದೆ. ಜನಪದರ ಎಲ್ಲಾ ಬಗೆಯ ಸತ್ವ, ಶಕ್ತಿಗಳನ್ನು ಮೈದುಂಬಿಕೊಂಡು ರಚಿತವಾದ ಅವರ ಕಾವ್ಯ ಅದನ್ನು ತೊಟ್ಟಿಕ್ಕಿದೆ.


ಅಳಬ್ಯಾಡ ತಂಗಿ ಅಳಬ್ಯಾಡ | ನಿನ್ನ
ಕಳುಹ ಬಂದವರೆಲ್ಲ ಉಳುವಿಕೊಂಬುವರೇನೆ||

      ಗ್ರಾಮ್ಯ ಭಾಷೆಯ ನುಡಿ ಸಾಲುಗಳಲ್ಲಿ ಹೆಣೆದಿರುವ ಈ ಪದ ಮದುವೆಯಾದ ಹೆಣ್ಣು ಮೊದಲ ಸಲ ಅತ್ತೆಯ ಮನೆಗೆ ಹೋಗುವ ಭಾವಮಯವಾದ ಸನ್ನಿವೇಶವನ್ನು ಸೃಜಿಸಿದರೂ ಕೊನೆಗೆ ಅನುಭಾವದ ನೆಲೆಗೆ ತಂದು ಹಚ್ಚುತ್ತವೆ. ‘ಮಿಡಿಕ್ಯಾಡಿ ಮದಿವ್ಯಾದಿ, ಹುಡುಕಾಡಿ ಮಾಯದ ಮರವೇರದಿ’ ಎಂತೆಲ್ಲ ಮಾತುಗಳು ಜೀವ ತಾನಾಗಿ ಭೋಗಕ್ಕೆ, ಮಾಯೆಗೆ ಒಲಿದದ್ದನ್ನು ಸೂಚಿಸುತ್ತದೆ. ತವರು ಮನೆ ಜೀವದ ನಿಜ ನೆಲೆಗೆ ರೂಪಕವಾಗುತ್ತದೆ.
ತತ್ತ್ವಪದಕಾರರು ಬಳಸುವ ಭಾಷೆಯಲ್ಲಿ ಜನರಾಡುವ ಮಾತಿಗೆ ಕಾವ್ಯತ್ವವನ್ನು ತುಂಬಿದರು.
ಹಾಲ ಕಾಸವ್ವ ತಂಗಿ ಹಾಲು ಕಾಸು
ನಿಂದು ಒಳ್ಳೆ ಮನಸ
ಹಾಲ ಕಾಸಿ ಹೆಪ್ಪ ಹಾಕಿ ಕೆನಿಯ ಬಡಸ
ಇದು ಬಹಳ ಸೊಗಸ
            (ತೆಲಗಬಾಳ ರೇವಪ್ಪ, 1790)

ನೆಚ್ಚಿಕಿಲ್ಲದ ಕಾಯಾ ನೀರಮ್ಯಾಲಿನ ಗುಳ್ಳಿ
ಗುಳ್ಳಿ ಒಡೆದ ಮ್ಯಾಲ ಆಗಿ ಹೋಯಿತು ಸಂತಿ
              (ಕಡ್ಲೆವಾಡ ಸಿದ್ದಪ್ಪ, 1811)

ಆಡೋ ಗುಗ್ಗಳ ಅಡಿಗಡಿನಾಡಿಸೋ ಗುಗ್ಗಳ
ಅಡಿಯಾಡಿ ಉಗ್ಗಡಿಸೋ ಗುಗ್ಗಳ
             (ಮೋಟನಳ್ಳಿ ಹಸನಸಾಹೇಬ, 1955)

ಹರಗ್ಯಾನ ಹಿಂಡ ಹೊಡದು ಸರಗೈ ಬಿತ್ತಪ್ಪ
ಬಕನೈದು ಬರತಾವ ಮ್ಯಾಲಿಂದ ಮ್ಯಾಲ
ಅವು ಸೇರಿ ಮಾಡತಾವ ಕಿಲ ಕಿಲ
ಭಾರಾ ಸೀತನಿ ಇದ್ದಲ್ಲಿ ನೂರಾರ
ಕೂಡತಾವ ದಾರಾರಿ ತೆನಿಯ ಮ್ಯಾಲ
             (ಬೇನೂರಿನ ಖಾಕಿಪೀರ, 1874)

ಅಳ್ಳಿಮುದ್ದಿ ಕಂಡ ಬೆಕ್ಕು ಬೆಣ್ಣೆಯೆಂದು ತಿಳಿತು
ಸುಳ್ಳೇ ಬಾಯಿ ಹಾಕಿ ಸತ್ತಿತು | ತಿಳಿ ಇದರಂತೆ
ಮಳ್ಳ ನಿನ್ನ ಭ್ರಾಂತಿ, ತಳ್ಳೋ ಸಂಸಾರ
ಚಿಂತಿ ಸುಳ್ಳೇ ಹಚಗೊಂಡು ಕುಂತಿ
            (ಮಾದನ ಹಿಪ್ಪರಗಾ ಸಿದ್ಧರಾಮ ಶಿವಯೋಗಿ, 1891)

ಘಾಸಿ ಆದ ಈ ಹೇಸಿ ಸಂಸಾರ ಯಾನೆ ಹ್ಯಾಂಗ ಆದಿತ್ತೋ
ಕಾಸು ತುಗೊಂಡು ಕಾಶಿಗೆ ಹೋದರ ಪಾಪ ಹ್ಯಾಂಗ ಹೋಗಿತ್ತೋ
             (ಮಹಾಗಾಂವ ಮೀರಸಾಬ, 1971)

ಆಲಾವಿನಾಡಿರೋ | ಪೀರನ ಆಲಾವಿನಾಡಿರೋ
ಬಸವೈ ಕೆವಸೈ ದೂಲಯಾಲ ಅನ್ನಿರಿ ಜನರೇ
           (ನೀರಲಕೇರಿ ಬಸವಲಿಂಗ ಶರಣ, 1812)

ತಿಳಿದು ನೋಡುವುದು ಸುಜ್ಞಾನ
ಮನ ತೊಳೆದು ನೋಡುವುದು ಮಹಾಜ್ಞಾನ !
ತಿಳಿಯದೆ ತೊಳೆಯದೆ ಮೂರು ಮಲಗಳೊಳ್
ಮುಳುಮುಳುಗ್ಯಾಡುವುದು ಅಜ್ಞಾನ
          (ಮರಕುಂದಿ ಬಸವಣ್ಣಪ್ಪ, 1780)

ಹದವಾಗಿ ಹದಿಮೂರು ತೂತಿಂದ ಹುಟ್ಟಿ ಬಂದದ ಗಡಗಿ
ಮಾಡಲಾಕ ಕಲ್ತರ ನೀಡಲಾಕ ಬರತಾದ ಅನುಭಾವದ ಅಡಗಿ
          (ಕೊಹಿನೂರ ಹಸನಸಾಬ, 1894)
  …….ಹೀಗೆ ಕನ್ನಡ ಕಾವ್ಯ ಪರಂಪರೆಯಲ್ಲಿ ಮೌಖಿಕ ಕಾವ್ಯ ಸೃಷ್ಟಿಯ ಸಂದರ್ಭವು ಜನಪದದ ನುಡಿ, ಪದ ಬಳಕೆ, ಜನಪದರ ಆಶಯದೊಂದಿಗೆ ಮೂಡಿ ಬಂದವು. ಒಬ್ಬೊಬ್ಬ ಪದಕಾರನು ತನ್ನ ರಾಚನಿಕ ವಿಶಿಷ್ಟತೆಯಿಂದ ಜಾನಪದ ಲೋಕವನ್ನು ಬೆಳೆಸಿದರು. ಉದ್ದಕ್ಕೂ ಬೆಳೆದು ಬಂದ ಈ ಪರಂಪರೆ ಆಧುನಿಕ ಕನ್ನಡ ಕಾವ್ಯ ರೂಪವನ್ನು ಯಾವ ಬಿಗುವು ಇಲ್ಲದೆ ಕಟ್ಟಿ ಕೊಟ್ಟಿತು. ಆಧುನಿಕ ಕಾವ್ಯ ಇಂಥ ರೂಪ ರಚನೆಗಳನ್ನೇ ಹೊತ್ತಕೊಂಡು ಮುದ್ರಣ ಸಂಸ್ಸøತಿಯಲ್ಲಿ ಒಡಮೂಡಿ ಬಂದವು.



       - ಡಾ.ಪ್ರಕಾಶ ಗ. ಖಾಡೆ
      ‘ಶ್ರೀಗುರು’ ,ಸರಸ್ವತಿ ಬಡಾವಣೆ,
      ಸೆಕ್ಟರ್ ನಂ. 63, ನವನಗರ,
      ಬಾಗಲಕೋಟ.
      ಮೊ.9845500890.
                                                             

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...