ಭಾನುವಾರ, ಆಗಸ್ಟ್ 2, 2020

ಕಪ್ಪು ಡೈರಿಗೆ ನನ್ನ ಮುನ್ನುಡಿ

ರಂಜನೆ, ರೋಚಕತೆ, ಕುತೂಹಲ, ವಿಸ್ಮಯ
ಇದು ಕಪ್ಪು ಡೈರಿ



ಸಾಧನೆಯ ಹಾದಿಯಲ್ಲಿ ತಮ್ಮದೇ ಆದ ಗತಿಯಲ್ಲಿ ನಡೆಯುತ್ತಿರುವ  ಬಾದಾಮಿಯ ಚಂದ್ರಕಾಂತ ತಾಳಿಕೋಟಿಯವರದು ನಿಷ್ಪ್ರಹ ವ್ಯಕ್ತಿತ್ವ. ತಾಳೀಕೋಟಿಯವರನ್ನು ಒಬ್ಬ ಲೇಖಕರನ್ನಾಗಿ ಸಾಹಿತ್ಯ ಮಾಧ್ಯಮದ ಮೂಲಕ ಕಾಲು ಶತಮಾನದಿಂದ ಬಲ್ಲೆ. ಆದರೆ ಒಬ್ಬ ಆತ್ಮೀಯ ಹಿರಿಯ ಗೆಳೆಯರನ್ನಾಗಿ, ಹಿತೈಷಿಗಳನ್ನಾಗಿ ಕಂಡುಕೊಂಡಿದ್ದು ನಾಲ್ಕೈದು ವರ್ಷಗಳಿಂದ ಈಚೆಗೆ.
ಸಂಯುಕ್ತ ಕರ್ನಾಟಕದಲ್ಲಿ ನಾನು ಸಾಪ್ತಾಹಿಕ ಸೌರಭಕ್ಕೆ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಅವರ ಕಥೆಗಳನ್ನು ಸಾಪ್ತಾಹಿಕ ಪುರವಣಿಗೆ ತೆಗೆದುಕೊಳ್ಳುವ ಸಂದರ್ಭ ಬಂದಾಗ ಅವರ ನೇರ ಸಂಪರ್ಕ ಸಿಕ್ಕಿತ್ತು. ಆವಾಗಿನಿಂದ ಅವರೊಂದಿಗೆ ನಮ್ಮ ಸಂಪರ್ಕ ನಿಕಟವೂ ಆತ್ಮೀಯವೂ ಆಗುತ್ತ ಹೋಗಿದ್ದು ನಮ್ಮ ಸುದೈವ. 
ಮಕ್ಕಳೊಂದಿಗೆ ಮಕ್ಕಳಾಗಿ, ಯುವಕರೊಂದಿಗೆ ಯುವಕರಾಗಿ, ಸಮವಯಸ್ಕರೊಂದಿಗೆ ಸಮವಯಸ್ಕರೇ ಆಗಿ, ಹಿರಿಯರ ಮುಂದೆ ಕಿರಿಯರಾಗಿ ಅವರು ನಡೆದುಕೊಳ್ಳುವ ರೀತಿ ನನಗೇ ಆಶ್ಚರ್ಯ ಹುಟ್ಟಿಸಿತ್ತು. ಬಾದಾಮಿಯ ಲೇಖಕಿ ಜಯಶ್ರೀ ಭಂಡಾರಿಯವರ ಪುಸ್ತಕ ಬಿಡುಗಡೆ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಆ ಸಂದರ್ಭದಲ್ಲಿ ನಾನು ನನ್ನ ಹಿರಿಯರಾದ ಎಲ್.ಎಸ್.ಶಾಸ್ತ್ರಿವರೊಂದಿಗೆ ಬಾದಾಮಿಗೆ ಹೋಗಿದ್ದಾಗ ತಾಳಿಕೋಟಿಯವರು ಎಲ್ಲರನ್ನೂ ನೋಡಿಕೊಳ್ಳುತ್ತಿದ್ದ ರೀತಿ, ಅವರ ಅತಿಥಿ ಸತ್ಕಾರದ ವೈಖರಿ ಅನನ್ಯ ಅನುಭವ ನೀಡಿತು.
ಕನ್ನಡದ ಬಹುತೇಕ ಪತ್ರಿಕೆಗಳಲ್ಲಿ ಅವರ ಬರಹಗಳನ್ನು, ಕತೆಗಳನ್ನು ಓದುತ್ತ ಬಂದಿದ್ದೇನೆ. ಲೇಖನಗಳನ್ನು ಗಮನಿಸಿದ್ದೇನೆ.ಹಲವು ಪತ್ರಿಕೆಗಳಲ್ಲಿ ಅವರ ಕಾದಂಬರಿಗಳು ಧಾರಾವಾಹಿಯಾಗಿ ಬಂದಾಗ ಒಬ್ಬ ಸಾಮಾನ್ಯ ಓದುಗನಾಗಿ ಓದಿ ಖುಷಿ ಪಟ್ಟಿದ್ದೇನೆ. ಮೊದಲಿಂದ ಪತ್ತೇದಾರಿ ಪ್ರಕಾರದ ಸಾಹಿತ್ಯ ಓದಿಕೊಳ್ಳುತ್ತ ಬಂದ ನನ್ನಂಥವನಿಗೆ ಸಹಜವಾಗೇ ತಾಳೀಕೋಟಿಯವರ ಕಾದಂಬರಿ ಪ್ರಕಾರ ಅದರಲ್ಲೂ ಪತ್ತೇದಾರಿ ಸಾಹಿತ್ಯ ಇಷ್ಟವಾಗಿದ್ದರಲ್ಲಿ ಆಶ್ಚರ್ಯ ಏನಿಲ್ಲ. ಜಿಂದೆ ನುಂಜುಂಡಸ್ವಾಮಿ, ಮಾಭೀಶೇ, ಸುದರ್ಶನ ದೇಸಾಯಿ, ಎಚ್.ಕೆ.ಅನಂತರಾಮ್, ಅವರ ಪತ್ತೇದಾರಿ ಸಾಹಿತ್ಯ ಓದಿಕೊಳ್ಳುತ್ತ ನನ್ನ ಪದವಿ ಶಿಕ್ಷಣದ ಸಮಯವನ್ನು ಕಳೆದವನು ನಾನು.
ಈಚೆಗೆ ಕನ್ನಡದ ಹೆಸರಾಂತ ಸಾಪ್ತಾಹಿಕ ಕರ್ಮವೀರದಲ್ಲಿ ಚಂದ್ರಕಾಂತ ತಾಳಿಕೋಟಿಯವರ ಪತ್ತೇದಾರಿ ಕಾದಂಬರಿ `ಕಪ್ಪು ಡೈರಿ' ಪ್ರಕಟಗೊಳ್ಳುವಾಗ ಕುತೂಹಲ ಮಡುಗಟ್ಟಿರುತ್ತಿತ್ತು. ಒದುಗರನ್ನು ಮುಂದಿನ ವಾರಕ್ಕೆ ಕಾಯವಂಥ ಕ್ಲೈಮ್ಯಾಕ್ಸ್ ಸಂದರ್ಭಗಳೊಂದಿಗೆ ಕಾದಂಬರಿಯ ಆ ಸಂಚಿಕೆ ಮುಕ್ತಾಯಗೊಳ್ಳುವಾಗ ಛೇ ಅನ್ನಿಸುತ್ತಿತ್ತು. ಮುಂದಿನವಾರಕ್ಕೆ ಕಾಯಬೇಕಲ್ಲ ಎಂಬ ಚಡಪಡಿಕೆ ಮನದಲ್ಲಿ. ಇದು ನನ್ನ ಅನುಭವ ಮಾತ್ರವಲ್ಲ ಬಹುತೇಕ ತಾಳೀಕೋಟಿಯವರ ಎಲ್ಲ ಓದುಗರ ಅನುಭವ ಆಗಿರಲಿಕ್ಕೂ ಸಾಕು. ಏಕೆಂದರೆ ಕರ್ಮವೀರದಲ್ಲಿ ಬರುತ್ತಿದ್ದ ಕಪ್ಪುಡೈರಿಯ ಧಾರವಾಹಿ ಪುಟಗಳನ್ನು ಚಂದ್ರಕಾಂತ ತಾಳಿಕೋಟಿಯವರು ನನ್ನ ಸಾರಥ್ಯದಲ್ಲಿ ನಡೆಯುತ್ತಿರುವ `ಭಾವ ಸಂಗಮ' ಸಾಮಾಜಿಕ ಜಾಲತಾಣದ ವೇದಿಕೆ ವಾಟ್ಸ್ ಆಪ್‍ದಲ್ಲಿ ಪ್ರಕಟಿಸುತ್ತಿದ್ದರು.ಭಾವ ಸಂಗಮದ 150 ಕ್ಕೂ ಹೆಚ್ಚಿನ ಓದುಗರನ್ನು ತುದಿಗಾಲಲ್ಲಿ ನಿಲ್ಲಿಸುತ್ತಿದ್ದ ಕಪ್ಪು ಡೈರಿ ಸಹಜವಾಗೇ ಗಮನ ಸೆಳೆದಿತ್ತು.
ಕರ್ಮವೀರದಲ್ಲಿ ನಿರಂತರ 23 ವಾರಗಳ ಕಾಲ ವಿಜೃಂಭಿಸಿದ ಕಪ್ಪುಡೈರಿ ಪತ್ತೇದಾರಿ ಸಾಹಿತ್ಯದ ಅಂಶಗಳ ಮೂಲಕ ಗಮನ ಸೆಳೆಯಿತು. ರಂಜನೆ, ಕುತೂಹಲ, ಓದಿಸಿಕೊಂಡು ಹೋಗುವ ವೇಗ,ಓದುಗನಲ್ಲಿ ತಾಧ್ಯಾತ್ಮ ಭಾವವನ್ನು ಮೂಡಿಸುತ್ತ ಸಾಗುವ ಶೈಲಿ ನಿಜಕ್ಕೂ ವಿಶಿಷ್ಟ ಅನುಭವವನ್ನು ಕಟ್ಟಿ ಕೊಡುತ್ತದೆ. ಐತಿಹಾಸಿಕ ಪ್ರಸಿದ್ಧ ಬಾದಾಮಿಯ ಪರಿಸರದಲ್ಲಿ ನಡೆಯುವ ಈ ಕಾದಂಬರಿಯ ಪಾತ್ರಗಳು ಬಾದಾಮಿಯ ಪರಿಸರವನ್ನು ಓದುಗುರಿಗೆ ಮತ್ತೆ ಮತ್ತೆ ಹತ್ತಿರಗೊಳಿಸಿಕೊಳ್ಳುತ್ತ ಸಾಗುವ ಪರಿ ನಿಜಕ್ಕೂ ವಿಸ್ಮಯಗೊಳಿಸುತ್ತದೆ.
ಬಾದಾಮಿಯ ಪರಿಸರದಲ್ಲಿನ ಒಂದು ಹಳ್ಳಿಯ ದೇವಸ್ಥಾನದಲ್ಲಿನ ಪುರಾತನ ವಿಗ್ರಹವೊಂದನ್ನು ಅಪಹರಿಸುವ ಗ್ಯಾಂಗ್ ಒಂದರ ಸುತ್ತ ಸುತ್ತಿಕೊಳ್ಳು ಕಥೆ ನಿಜಕ್ಕೂ ಓದುಗರಿಗೆ ಅನನ್ಯ ಅನುಭವ ಕಟ್ಟಿಕೊಡುತ್ತದೆ. ಹೆಜ್ಜೆ ಹೆಜ್ಜೆಗೂ ಕುತೂಹಲ ಕೆರಳಿಸುತ್ತ ಮುಂದೇನು ಎಂಬ ಕಾತುರತೆಯನ್ನು ಹುಟ್ಟಿಸುತ್ತ ಸಾಗುವ ಕಪ್ಪು ಡೈರಿಯ ಪುಟಗಳೇ ವಿಸ್ಮಯ ಲೋಕಕ್ಕೆ ನಮ್ಮನ್ನು ಕರೆದುಕೊಂಡು ಹೋಗುತ್ತವೆ. ನಚಿಕೇತ, ಪೊಲೀಸ್ ಅಧಿಕಾರಿಗಳಾದ ಪ್ರದ್ಯುಮ್ನ, ಸಂದೀಪ ಪಾಟೀಲ, ಸ್ಫೂರ್ತಿಯಂಥ ಪಾತ್ರಗಳು ಓದುಗರನ್ನು ಕಟ್ಟಿ ಹಾಕುತ್ತವೆ. ಕೃತಕತೆಗೆ ಅವಕಾಶವೇ ಇಲ್ಲದಂತೆ ತೀರ ಸರಳವಾಗಿ ಓದಿಸಿಕೊಂಡು ಹೋಗುವ ಕಪ್ಪುಡೈರಿ ಇತ್ತೀಚಿನ ಪತ್ತೇದಾರಿ ಸಾಹಿತ್ಯದಲ್ಲಿ ವಿಶಿಷ್ಟ ಮತ್ತು ವಿಶೇಷ ಅನುಭವ ಕೊಡುತ್ತದೆ. ಕಪ್ಪುಡೈರಿಯ ಆಂತರ್ಯವನ್ನು ನಾನು ಹೇಳುವ ಅಗತ್ಯ ಇಲ್ಲ. ಅದು ನನ್ನ ಕೆಲಸವೂ ಅಲ್ಲ. ಅದು ಓದುಗರದ್ದೇ ಪ್ರೀತಿಯ ಹೊಣೆಗಾರಿಕೆ.
ಮಾಧ್ಯಮಗಳಲ್ಲಿ ಪತ್ತೇದಾರಿ ಕಥೆಗಳು, ಕಾದಂಬರಿಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಚಂದ್ರಕಾಂತ ತಾಳಿಕೋಟಿಯವರು ಆಶಾಕಿರಣವಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಎಲ್ಲ ಪ್ರಕಾರಗಳಲ್ಲಿ ಇವರದು ಅನುಭವ ಜನ್ಯ ಬರವಣಿಗೆಯಾದರೂ ಕಥಾ ಪ್ರಕಾರ, ಅದರಲ್ಲೂ ವಿಶೇಷವಾಗಿ ಪತ್ತೇದಾರಿ ಪ್ರಕಾರದಲ್ಲಿ ಗಮನ ಸೆಳೆಯುವ ಬರಹ ಚಂದ್ರಕಾಂತ ತಾಳೀಕೋಟಿಯವರದು. ಹಿರಿಯಲ್ಲಿ ಹಿರಿಯರಾಗಿ, ಕಿರಿಯರಲ್ಲಿ ಕಿರಿಯರಾಗಿ ಎಲ್ಲರೊಡನೊಂದಾಗಿ ಹಾಲಲ್ಲಿ ಜೇನಾಗಿ ಬರೆಯುವ ಸಹಜ ಪ್ರವೃತ್ತಿಯ ತಾಳಿಕೋಟಿಯವರ ವ್ಯಕ್ತಿತ್ವ ತೀರ ಸರಳವಾಗಿ ಅರ್ಥೈಸಿಕೊಳ್ಳುವಂಥ ಉದಾತ್ತ ಮನೋಭಾವ.
ನನಗಿಂತ 9 ವರ್ಷ ಹಿರಿಯರಾದರೂ ಅವರ ನಯ ವಿನಯ ಭರಿತ ಮಾತುಗಳು ನಮಗೇ ಒಮ್ಮೊಮ್ಮೆ ಮುಜುಗುರಕ್ಕೆ ಎಡೆ ಮಾಡಿಕೊಡುವಷ್ಟು ಕೋಮಲ ಕುಸುಮದಂತೆ ವ್ಯಕ್ತಿತ್ವ. ಎಲ್ಲರೊಂದಿಗೂ ಅವರದು ಸರಳ ನಡೆ ನುಡಿ. ಬಸವಣ್ಣನವರ ದೃಷ್ಟಿಯ ಶರಣರಂಥ ವ್ಯಕ್ತಿತ್ವ ಎಂದರೆ ಅತಿಶಯೋಕ್ತಿ ಎನಿಸಿದರೂ ಪ್ರಾಯಶ ಅದಕ್ಕಿಂತ ಬೇರೆ ಹೋಲಿಕೆ ಕೊಡಲಾಗದಂಥ ವ್ಯಕ್ತಿತ್ವ ಅವರದು.
ಮೂಲತಃ ನನ್ನ ವಿಜಯಪುರ ಜಿಲ್ಲೆಯ ಸಿಂದಗಿಯವರೇ ಆದ ಚಂದ್ರಕಾಂತ ತಾಳಿಕೋಟಿಯವರು ಬಾದಾಮಿಯನ್ನು ತಮ್ಮ ಕರ್ಮಭೂಮಿಯಾಗಿಸಿಕೊಂಡವರು. 35 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶಿಕ್ಷಣ ಕ್ಷೇತ್ರದಲ್ಲೂ ತಮ್ಮ ಹೆಜ್ಜೆಗಳನ್ನು ಗುರುತಿಸಿಕೊಂಡವರು. ರಾಷ್ಟ್ರಪ್ರಶಸ್ತಿ ಪುರಸ್ಕøತರಾದ ತಾಳಿಕೋಟಿಯವರು ನಿಜಕ್ಕೂ ಆ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದವರು. ಇವರ ಹಲವಾರು ಕತೆ, ಕಾದಂಬರಿಗಳು ಸುಧಾ, ತರಂಗ, ರಾಗಸಂಗಮ, ತರಂಗ, ಸುದ್ದಿ ಸಂಗಾತಿ, ಸಂಯುಕ್ತ ಕರ್ನಾಟಕ, ಕರ್ಮವೀರ ಸೇರಿದಂತೆ ನೂರಾರು ಪತ್ರಿಕೆಗಳಲ್ಲಿ ಬೆಳಕು ಕಂಡು ಅಪಾರ ಒದುಗರ ಒಲವು ಗಳಿಸಿವೆ. ಇವರ ಹಲವು ಬರಹಗಳು ಉರ್ದುವಿಗೂ ಭಾಷಾಂತರಗೊಂಡು ಗಮನ ಸೆಳೆದಿವೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ವಿಕ್ರಮ ಪೈಲ್ ಪ್ರಶಸ್ತಿ, ತತ್ವಜ್ಞಾನಿ ಮಹಾಯೋಗಿ ವೇಮನ ಪ್ರಶಸ್ತಿ,ಜ್ಞಾನ ಶಿವಶ್ರೀ ಪ್ರಶಸ್ತಿಗಳು ಇವರ ವ್ಯಕ್ತಿತ್ವಕ್ಕೆ ಮೆರುಗು ನೀಡಿವೆ. ಇವರ ಸಾಧನೆಯ ಬೆಳಕು ಚೆಲ್ಲುವ ಕಾರ್ಯಕ್ರಮ ವಿಜಯಪುರ ಆಕಾಶವಾಣಿಯಿಂದ ಪ್ರಸಾರಗೊಂಡಿದ್ದು ಬದುಕಿನ ದಾರಿಯಲ್ಲಿ ಮೈಲಿಗಲ್ಲು ಎನ್ನಬಹುದು. ಹಲವಾರು ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುವ ಚಂದ್ರಕಾಂತ ತಾಳಿಕೋಟಿಯವರದ್ದು ಚಂದ್ರಕಾಂತಿಯಂಥ ವ್ಯಕ್ತಿತ್ವ.ನಾನು ತುಂಬ ಇಷ್ಟ ಪಡುವ ಪ್ರೀತಿ ಪಾತ್ರ ವ್ಯಕ್ತಿತ್ವ. ಇಂಥ  ಅಪೂರ್ವ `ಪುರುಷ ರತ್ನ' ಎನಿಸಿರುವ ಚಂದ್ರಕಾಂತ ತಾಳಿಕೋಟಿಯವರ ಕಾದಂಬರಿಗೆ ಮುನ್ನುಡಿ ಬರೆಯುವ ಸೌಭಾಗ್ಯ ನನಗೆ ಸಿಕ್ಕಿದೆ. ಅದು ಪ್ರಾಯಶಃ ನನ್ನ ಅವರ ನಡುವಿನ ಸ್ನೇಹಕ್ಕೆ ಸಿಕ್ಕ ಗೌರವ ಪ್ರಶಸ್ತಿ ಎಂದೇ ನಾನು ಭಾವಿಸಿದ್ದೇನೆ. ಸ್ಪರ್ಶಮಣಿಯಂಥ ವ್ಯಕ್ತಿತ್ವದ ಅವರ ಲೇಖನಿಯಿಂದ ಇನ್ನೂ ಸಾಕಷ್ಟು ಕೃತಿಗಳು ಹೊರ ಬರಲಿ ಎಂದು ಆಶಿಸುತ್ತೇನೆ. ಕಪ್ಪು ಡೈರಿ ನಿಮ್ಮ ಕೈಲಿದೆ. ಓದಿಕೊಳ್ಳಿ. ಧನ್ಯವಾದಗಳು.




- ರಾಜೇಂದ್ರ ಪಾಟೀಲ, ಹುಬ್ಬಳ್ಳಿ
( ಉಮಾತನಯರಾಜ )
ಮೊ:9591323453

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...