ಬುಧವಾರ, ಜುಲೈ 15, 2020

ಇಂದುಮತಿ ಲಮಾಣಿ ಅವರ ಪತ್ತೇದಾರಿ ಕತೆ ಜಾಲ...!!

ಪತ್ತೇದಾರಿ ಕತೆ  

ಜಾಲ...!!


ಧೂಳಬ್ಬಿಸುತ್ತ ಪೋಲೀಸ್ ಜೀಪ್ ಭರ್ರನೆ ಬಂದಾಗ, ಭೀತಿಯಿಂದ ಬಿರುಗಾಳಿಗೆ ಸಿಲುಕಿದ ತರಗೆಲೆಯಂತೆ ಜನವೆಲ್ಲಾ ಚಲ್ಲಾಪಿಲ್ಲಿ ಆಗಿ ಓಟ ಕಿತ್ತರು. ಅಬ್ಬ ,!! ಆ ಜೀಪಿನಿಂದ ಇಳಿದ ತೋಳದಂಥಾ ನಾಯಿಯನ್ನು ಕಂಡು ನಿಂತಲ್ಲಿಯೇ ಗದಗುಟ್ಟಿ ನಡುಗಿದರು. ಅದನ್ನು ಮೃತ ಶರೀರದತ್ತ ಕರೆ ತಂದು ಬಿಟ್ಟರು. ಅಲ್ಲಿ ಇಲ್ಲಿ ಮೂಸಿ ನೋಡಿದ ನಾಯಿ ಒಂದು ದಾರಿ ಹಿಡಿದು ಓಡಲಾರಂಬಿಸಿತು. ಬೆಪ್ಪರಾಗಿ ನೋಡುತ್ತಾ ನಿಂತಿತು ಜನೋಸ್ತಮ. ಅದರ ಹಿಂದೆ ಪೋಲೀಸ್ ಜೀಪ್ ಧಾವಿಸಿತು. ತುಸು ದೂರಕೆ ಹೋದ ನಾಯಿ, ಸಿಕ್ಕ ಸಿಕ್ಕಲ್ಲಿ ಮೂಸುತ್ತ, ಉಚ್ಚೆ ಮಾಡುತ್ತ, ಮತ್ತೆ ವಾಪಸ್ಸಾಯಿತು. ನಂತರ ಶವವನ್ನು ಮಹಜರು ಮಾಡಿ,ವ್ಯಾನಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಒಯ್ದುರು. ಪೋಸ್ಟ ಮಾರ್ಟ್ ಮಾಡಿದಾಗ, ಶರೀರಕ್ಕೆ ನಾಲ್ಕಾರು ಕಡೆ ಜಂಬೆಯಿಂದ ಇರಿಯಲಾಗಿದ್ದರಿಂದ ಅತಿ ರಕ್ತಸ್ರಾವದಿಂದ ಈ ಸಾವು ಸಂಭವಿಸಿದೆ ಅಂತ ವರದಿ ಬಂತು. 
ಈ ಕೋಲೆ ರಹಸ್ಯ ಭೇಧಿಸಲು ವಿಚಾರಣೆ ಮಾಡಿದಾಗ ಒಂದು ವಿಷಯ ತಿಳಿಯಿತು. ಕೊಲೆಯಾದ ಸೋಮಲಾಗೆ ಹೆಂಡತೀಯರಿಬ್ಬರಿದ್ದದ್ದು ತಿಳಿತು.ಅವಬ್ಬರ ಜತೆಯೂ ಈತ ಸಧ್ಯಕ್ಕೆ ಇರುತ್ತಿರಲಿಲ್ಲ. ಅತಿ ಖಡಕ್ ಆಸಾಮಿ ದೈತ್ಯ ಶರಿರ ಹೊಂದಿದ್ದ ಅವನು ಒಂದು ರೀತಿಯಲ್ಲಿ ಖಯಾಲಿ ಮನಸ್ಯಾನೂ ಇದ್ದ ಅಂತ ಮಾಹಿತಿ ಸಿಕ್ತು.
ಮಕ್ಕಳೆಲ್ಲ ಮದುವೆ ವಯಸ್ಸಿಗೆ ಬಂದಿರುವ ಸಮಯದಲ್ಲಿ ಇವನು ಮತ್ತೊಬ್ಬಳನ್ನು ಕಟ್ಟಿಕೋಂಡು ಬಂದು ಬೇರೆ ಮನೆ ಮಾಡಿಟ್ಟಿದ್ದ. ಆದರೆ ಆಕೆ ಸಹನಾಮೂರ್ತಿ, ಗಂಡ ತಂದ ಸವತಿಯೊಂದಿಗೆ ತಂಟೆ ತಕರಾರು ಮಾಡಲಿಲ್ಲ. ಆಕೆ ಮಹಾ ಪತಿಭಕ್ತಿಯುಳ್ಳ ಮುಗುದೆ. ಪತಿಯ ಖುಷಿಯೇ ತನ್ನ ಖುಷಿ ಅಂತ ಓಡಿ ಬಂದವಳನ್ನು ತಂಗಿಯಂತೆ ಕಂಡದ್ದು ಮಾತ್ರ ಜಗತ್ತಿನಲ್ಲಿನ ಅದ್ಭುತ ಅನಿಸಿತ್ತು. ಸವತಿಯ ಮಕ್ಕಳು ತನ್ನ ಮಕ್ಕಳು ಅಂತ ನಿಷ್ಕಾಮ ವಾತ್ಸಲ್ಯದಿಂದ ಪ್ರೀತಿಸುವ ಲಾವಣ್ಯ ಕೂಡ ಈ ಮಾತಿಗೆ ಹೊರತಾಗದೆ, ಬಲು ಬೇಗ ಎಲ್ಲರ ಪ್ರೀತಿಗೆ ಪಾತ್ರಳಾದಳು ಅರ್ಧ ವಯಸ್ಸು ಕಳೆದ ಸೋಮಲಾನ ಬದುಕಿನಲ್ಲಿ ಇದು ಮತ್ತೆ ಹರೆಯ ತಂದುಕೊಟ್ಟಿತ್ತು. ಇಬ್ಬರು ಹೆಂಡೀರ ಸುಖದಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಾದ. 
ಈತ ಇನ್ನೂ ಕೆಲ ಕಡೆ ಶಾಲೆ ತೆರೆದಿದ್ದಾನೆ. ಸ್ವಭಾವದಲ್ಲಿ ಉದಾರಿತನ, ಬಡವರಿಗೆ ಅಷ್ಟಿಷ್ಟು ಸಹಾಯ ಮಾಡುತ್ತ ಜನಪ್ರಿಯತೆ ಹೊಂದಿದ್ದ. ಇವನು ದೈವತ್ವವನ್ನು ಅಪಾರವಾಗಿ ನಂಬುತ್ತಿದ್ದ.ಇದಕ್ಕೆ ಉದಾಹರಣೆಯಾಗಿ, ಒಮ್ಮೆ ಇವರಿರುವ ಊರಿಗೆ ಸಿದ್ಧೇಶ್ವರ ಸ್ವಾಮಿಗಳಿಂದ ಒಂದು ತಿಂಗಳು ಪ್ರವರ್ಚನ ನಡೆದಾಗ ಇದೇ ಶಾಲೆಯಲ್ಲಿನ ಅದೇ ಖೋಲಿಯಲ್ಲಿ ಪೂಜ್ಯರು ವಾಸ್ತವ್ಯ ಹೂಡಿದ್ದರು. ಗುರುವಿನ ಸೇವೆ ಮಾಡುವ ಭಾಗ್ಯ ಇವನಿಗೆ ಲಭಿಸಿತ್ತು. ಲಾವಣ್ಯ ಮತ್ತು ಪುತ್ರ ರಾಮನ ಸಹಕಾರ ಬಹಳವಾಗಿತ್ತು. ಎಲ್ಲಾ ಖರ್ಚುವೆಚ್ಚ ತಾನೇ ಸ್ವತಃ ಭರಸಿದ್ದ. ಗುರುವಿನ ಆಶಿರ್ವಾದ ಫಲ ಮತ್ತು, ಅವರ ಸಾನಿಧ್ಯದ ಪರಿಣಾಮದಿಂದಲೋ ಎನೋ ಇವನಿಗೂ ಜೀವನದಲ್ಲಿ ಜುಗುಪ್ಸೆಯಾಗಿರಬೇಕು ಅದಕ್ಕೆ , ಈಗೀಗ ಒಬ್ಬನೇ ಇರತೊಡಗಿದ್ದ. ಧ್ಯಾನ ಪೂಜೆ ಜಪ ತಪದಲ್ಲಿ ಆನಂದ ಕಾಣುತ್ತ, ಪ್ರಪಂಚ ಮರೆತಿದ್ದ. ಇಂಥಾವಾ ಅಧ್ಯಾಂಗ ಕೊಲೆಯಾದಾ ಅಂತ ಪೋಲಿಸಾದಿಯಾಗಿ ಎಲ್ಲರಿಗೂ ಯಕ್ಷ ಪ್ರಶ್ನೆಯಾಗಿತ್ತು. ತನಿಖೆ ಚುರುಕು ಗೊಂಡಿತಾದರೂ ಎಲ್ಲಾ ಕಡೆ ಅವನ ಒಳ್ಳೆಯತನವೇ ಎದುರಾಯಿತು. ಮನೆ ಮಂದಿಗೆ ಎಷ್ಟು ವಿಚಾರಿಸಿದರೂ ಯಾವೊಂದೂ ಕ್ಲೂ ಸಿಗುತ್ತಿಲ್ಲ. ಯಾರ ಮೇಲೂ ಅನುಮಾನ ಯಾರಿಗೂ ಇಲ್ಲ. ಯಾವ ವೈರಿಯೂ ಇವರಿಗಿಲ್ಲ. ಹೀಗಾದಾಗ ಈ ಕೇಸು ಪೋಲೀಸರಿಗೊಂದು ದೊಡ್ಡ ಸವಾಲಾಯಿತು. 
ಸೋಮಲಾನ ಸಂಬಂಧೀಕರರು ಕೊಲೆಗಡುಕನನ್ನು ಬೇಗ ಹಿಡಿಯುವಂತೆ ಒತ್ತಾಯ ಹೇರಿದರು. ಅದಲ್ಲದೆ , ಮೇಲಧಿಕಾರಿಗಳ ಒತ್ತಡ ಬೇರೆ ಪ್ರಾಣ ಹಿಂಡಲಾರಂಭಿಸಿತು. ಎಲ್ಲಾದಕ್ಕೂ ಹೆಚ್ಚು ಒತ್ತಾಯ ಆ ಊರ ಗೌಡರದಾಗಿತ್ತು. ಬಡತನದಲ್ಲಿದ್ದೂ, ಸ್ವಂತ ದುಡಿಮೆಯಿಂದ ಎತ್ತರಕ್ಕೆ ಬೆಳೆದು, ರಾಜಕೀಯದಲ್ಲಿ, ಶ್ರೀಮಂತಿಕೆಯಲ್ಲಿ, ತಮ್ಮನ್ನು ಮೀರಿಸಿ ಬೆಳೆದವನು ಮತ್ತು ಊರಿನ ಕೀರ್ತಿಗೆ ಕಾರಣವಾಗಿದ್ದ ಆವನ ಕೊಲೆ ಇಷ್ಟು ಹೀನಾಯವಾಗಿ ಆದದ್ದು ಅವರು ಸಹಿಸದಾಗಿದ್ದರು. ಒಂದು ರೀತಿಯಲ್ಲಿ ಸೋಮಲಾ ಇವರ ಶಿಶ್ಯನೂ ಹೌದು.ಯಾಕೆಂದರೆ ತಲತಲಾಂತರದಿಂದ ಇವನ ಮನೆತನ ಈ ಗೌಡರ ಮನೆಯ ಜೀತದಾಳು ಆಗಿ ದುಡಿದವರು. ಯಾವಾಗ ಸೋಮಲಾ ತುಸು ಓದಿ ಪ್ರಪಂಚ ಅರಿತನೋ ಆಗಲೇ ಜೀತ ಪದ್ಧತಿ ವಿರುದ್ದ ಸಮರ ಸಾರಿದ್ದ. ಬೇರೆ ರಾಜ್ಯಕ್ಕೆ ಹೋಗಿ ದುಡಿಮೆ ಮಾಡಿ ಗೌರವದ ಬದುಕು ಕಟ್ಟಿಕೊಂಡಿದ್ದು ಎಲ್ಲ ಬಡವರಿಗೆ ಮಾದರಿಯಾಗಿತ್ತು. ಅವನ ಸ್ವಾಭಿಮಾನಿ ಬದುಕು ಅವನ ಕೈ ಬಿಡಲಿಲ್ಲ. ಜಮೀನು ಖರೀದಿಸಿ ಜಮಿನ್ದಾರನಾದ. ರಾಜಕೀಯ ತಿಳಿದುಕೊಂಡು ರಾಜಕೀಯ ರಾಜ್ಯ ರಾಜಕೀಯದಲ್ಲಿ ಒಳ್ಳೆಯ ಹೆಸರು ಸಂಪಾದಿಸಿಕೊಂಡಿದ್ದ. ಈ ಸಲದ ಚುನಾವಣಾ ಟಿಕೆಟ್ ಇವನಿಗೆ ಸಿಕ್ಕಿತು. ಮುಂದೆ ಶಾಶಕನಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದವು. ಈ ಬೆಳವಣಿಗೆ ಗೌಡರಿಗಂತು ತುಂಬಾ ಅಭಿಮಾನದ ಮಾತಾವಾಗಿತ್ತು. ಇವನು ನಮ್ಹುಡಗ ಅಂತ ಮೀಸೆ ತಿರುವಿ ಎದೆಯುಬ್ಬಿಸಿ ಹೇಳುತ್ತಿದ್ದರು. ಆದರೆ ಸೋಮಲಾನ ಸಾವು ಅವರನ್ನೂ ಈಗ ಬುಡಮೇಲು ಅಲುಗಾಡಿಸಿ ತತ್ತರಿಸಿದೆ.
ಪೊಲೀಸರಿಗೆ ತಲೆ ಕೆಟ್ಟು ಹೋಯಿತು. ಆ ಶಾಲೆಯ ಗಾರ್ಡನನ್ನೇ ಹಿಡಿದು ಮತ್ತೊಮ್ಮೆ ಸರಿಯಾಗಿ ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಸೋಮಲಾಗೆ ಡೈರಿ ಬರೆಯುವ ಅಭ್ಯಾಸ ಇತ್ತು ಅಂತ ತಿಳಿದಾಗ ತುಸು ಬೆಳಕು ಕಂಡಂತಾಯಿತು. ಸರಿ ಅದಕ್ಕಾಗಿ ತಡಕಾಡುವ ಕೆಲಸ ತಿವ್ರವಾಯಿತು. ಶಾಲೆ, ಮತ್ತು ಲೈಬ್ರರಿ, ಹಾಗೂ ಇಬ್ಬರೂ ಸವತಿಯರ ಮನೆ ಜಾಲಾಡಲಾಯಿತು ಎಷ್ಟು ಹುಡುಕಿದರೂ ಆ ಡೈರಿ ಸಿಗದಾಯಿತು.ಅಸಲಿಗೆ ಸೋಮಲಾ ಡೈರಿ ಬರೆಯುವದು ಗಾರ್ಡ ಹೊರತಾಗಿ ಮನೇ ಮಂದಿಗ್ಯಾರಿಗೂ ಗೊತ್ತಿಲ್ಲ. ಯಾಕೆಂದರೆ ರಾತ್ರಿ ಹಗಲು ಅವನೊಬ್ಬನೇ ಸೋಮಲಾ ಜತೆಗಿರುತ್ತಿದ್ದ. ಎಷ್ಟು ಹುಡುಕಿದರೂ ಡೈರಿ ಕೈಗೆ ಸಿಗಲೇ ಇಲ್ಲ. ಪೋಲಿಸರು ಇನ್ನೂ ಹೈರಾಣಿ ಆದರು. ಬೇಸರದಿಂದ ಸಿಕ್ಕ ಸಿಕ್ಕವರನ್ನು ಶಂಕೆಯಿಂದ ಹಿಡಿದು ಬೆತ್ತದ ರುಚಿ ತೋರಿಸಿ ಸೋತರು.ಎನೇ ಮಾಡಿದರೂ ಯಾವ ಫಲ ಕೊಡಲಿಲ್ಲ. ಕೇಸು ಜಟೀಲವಾಗುತ್ತಲೇ ಹೋಯಿತು.ಹೀಗಿರುವಾಗ ಮತ್ತೊಂದು ಅವಘಡ ಆಗಿಯೇ ಹೋಯಿತು. ಈ ಊರಿಗೆ ಅದೇನು ಪೀಡಾಟವೋ!!
ಮತ್ತೊಂದು ಕೊಲೆ ನಡೆದೇ ಹೋಗಿತ್ತು. ಧಾವಿಸಿ ಬಂದ ಪೋಲೀಸರೊಂದಿಗೆ ಗೌಡರೂ ಬಂದು ಗರಬಡಿದು ನಿಂತರು. ಯಾಕೆಂದರೆ ಆ ಕೊಲೆ ಅತೀ ಭಯಂಕರವಾಗಿತ್ತು. ರಾಜಕೀಯ ಹಿರಿಯ ಮುತ್ಸದ್ದಿಯಾದ ರಾಜಣ್ಣ, ನಿರ್ಮಾಣ ಹಂತದಲ್ಲಿದ್ದ ತನ್ನದೇ ದೊಡ್ಡ ಬಂಗಲೆಯಲ್ಲಿ ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದದ್ದ. ಆ ದೃಶ್ಯ ಕಂಡ, ಎಂಥಹ ಗಟ್ಟಿ ಗುಂಡಿಗೆಯೂ ಗಡಗಡಿಸುವಂತಹ ಭಯಾನಕವಾಗಿತ್ತು. ನೆಲದಲ್ಲಿ ರಕ್ತದೊಂದಿಗೆ ಅಡುಗೆ ಎಣ್ಣೆಯೂ ಚಲ್ಲಾಡಿತ್ತು. ಅಟ್ಯಾಕ್ ಮಾಡಿದ ಕೊಲೆಗಡುಕರು ಈ ವ್ಯಕ್ತಿಗೆ ಓಡಲಾಗದಂತೆ ಎಣ್ಣೆ ಸುರುವಿದ್ದು ಅರ್ಥವಾಯಿಿತು. 
ಜನ ತತ್ತರಿಸಿ ಹೋಗಿದ್ದರು. ಕೇವಲ ವಾರದಲ್ಲಿ ಎರಡು ಕೊಲೆ. ಕೋಲೆಯಾದ ಇರ್ವರೂ ಅಸಮಾನ್ಯರು. ಈ ಊರಿಗೆ ರಾಜಕೀಯ ಮುಂಚುಣಿಯಲ್ಲಿರುವ ಹುರಿಯಾಳುಗಳು.
ಮಾಧ್ಯಮದಲ್ಲಿ ಈ ಸುದ್ದಿಗಳು ಪೈಪೋಟಿ ತೆರದಲ್ಲಿ ಬಿತ್ತರಗೊಂಡವು. ಪತ್ರಿಕಾ ವರದಿ ದೊಡ್ಡ ದೊಡ್ಡ ಫೋಟೊ , ದಪ್ಪ ದಪ್ಪ ಅಕ್ಷರಗಳಲ್ಲಿ ಬಿಂಬಿತಗೊಂಡವು. ಇದು ರಾಜಕೀಯ ಪಕ್ಷ, ವಿಪಕ್ಷದವರ ಕೆಸರೆರಚಾಟಕೆ ನಾಂದಿಯಾಯಿತು. ಆಡಳಿತ ಪಕ್ಷದ ನಿದ್ದೆ ನೀರಡಿಕೆ ಕಿತ್ತುಕೊಂಡವು. ಪೋಲಿಸರು ಇವರ ಮಧ್ಯೆ ಸಿಲುಕಿ ಅರೆ ಜೀವವಾಗಿಹೋದವು.ಮತ್ತೊಂದು ಅವಘಡವಾಗುವ ಮುಂಚೆ ಆ ಕೊಲೆಗಳ ರಹಸ್ಯ ಬೇಧಿಸಲು ಖಡಕ್ ಆಗಿ ಪೋಲಿಸರ ಮೇಲೆ ಅತೀ ಕಠೀಣ ಆದೇಶ ಹೊರಡಿಸಲಾಯಿತು.ಅಲ್ಲಿದ್ದ ಪೋಲೀಸ್ ಆಫೀಸರ್ ನನ್ನು ಕಿತ್ತು ಹಾಕಿ, ಹೊಸಬರನ್ನು ನಿಯಮಿಸಲಾಯಿತು. ಈಗ ಬಿಗಿಬಂದೋಬಸ್ತ ಬೇಲಿ ಹಾಕಿದ ಆ ಊರಿನಲ್ಲಿ ಮತ್ತಷ್ಟು ತನಿಖೆ ಚುರುಕುಗೊಂಡಿತು.
ಹಿಗಿರುವಾಗ ಅವತ್ತು ಯಾರೋ ಒಬ್ಬ ತಂದ ಸುದ್ದಿ ಸಾಹೇಬರ ಕಿವಿ ನಿಮಿರಿಸಿತು.ಆದರೆ ಸರಿಯಾಗಿ ಪರಾರ್ಮಿಸದೆ ಯಾವುದೇ ಕ್ರಮ ಕೈಗೊಳ್ಳಲಾಗದಾಗಿತ್ತು.
ಆ ದಿನ ರಾತ್ರಿಯ ಒಂದು ಗಂಟೆ. ಊರೆಲ್ಲ ಸ್ತಬ್ಧವಾಗಿತ್ತು. ಮಾರುವೇಶದ ಪೋಲಿಸರ ಗಸ್ತು ಬಿರುಸಾಗಿತ್ತು. ಇದು ರಾಜಕೀಯ ಗುದ್ದಾಟ ಅಂತ ಮೇಲ್ನೋಟಕ್ಕೆ ಕಾಣುತಿದ್ದರೂ ಎಕದಂ ತಿರ್ಮಾನ ಮಾಡಲು ಬರುವದಿಲ್ಲ. ಯಾಕೆಂದರೆ ಎರಡೂ ಕೊಲೆ ರಾಜಕೀಯ ಧುರೀಣರದೇ ಆಗಿದ್ದರೂ ಇದರ ಹಿಂದಿನ ಶಡ್ಯಂತರವೇನು ಅಂತ ಪತ್ತೆ ಹಚ್ಚುವದು ಮುಖ್ಯವಾಗಿರುತ್ತದೆ.
ಆ ದಿನ ಒತ್ತು ಗಾಡಿಯಲ್ಲಿ ತರಕಾರಿಗಳನ್ನು ಹೊತ್ತು ತಂದ ಅವನು ಊರಿಗೆ ಹೊಸಬನಾಗಿ ಕಂಡಿದ್ದ. ಸಹಜ ಜನ ಅವನನ್ನು ಯಾರು,ಎಲ್ಲಿಂದ ಬಂದೆ ಅಂತ ವಿಚಾರಿಸಿದರು. ಕಾರಣ ಈ ಊರು ಚಿಕ್ಕದು. ಯಾರೇ ಹೊಸಬರು ಬಂದರೂ ಜನಕ್ಕೆ ಬೇಗ ಗೊತ್ತಾಗುತ್ತಿತ್ತು. ಪಟ್ಟಣದಲ್ಲಿ ಹೀಗೆ ವಿಚಾರಿಸುವದು ಬಹಳ ಕಮ್ಮಿ. ಆದರೆ ಹಳ್ಳಿಯಲ್ಲಿ ಜನ ಸುಮ್ಮನೆ ಇರೋಲ್ಲ.
ತಮ್ಮ ಊರಿನಲ್ಲಿ ಬರಗಾಲ, ಹೊಟ್ಟೆ ಪಾಡಿಗಾಗಿ ಈ ಊರಿಗೆ ಬಂದಿರುವುದಾಗಿಯೂ, ಮನೆಯೊಂದು ಬಾಡಿಗೆಗೆ ಬೇಕಿದೆಯೆಂದು ಆ ವ್ಯಾಪಾರಿ ಹೇಳಿದ್ದ. ದಯಾಳು ಹಳ್ಳಿ ಜನ ಅವನ ಸ್ತಿಥಿಗೆ ಮರುಗಿ ಮನೆಯೊಂದು ಬಾಡಿಗೆಗೆ ಕೊಡಿಸಿದರು. ತುಸು ದಿನದಲ್ಲಿ ಇನ್ನಿಬ್ಬರು ಅವನ ಜತೆ ಬಂದು ಸೇರಿಕೊಂಡರು. ಅಲ್ಲಿನ ಜನ ಹೆಚ್ಚಾಗಿ ಕೃಷಿಕರು. ಇಡೀ ದಿನ ಹೊಲ ತೋಟದಲ್ಲಿ ಕಾಯಕ ಮಾಡಿ ರಾತ್ರಿ ಮನೆಗೆ ಬಂದರೆ ಬೇಯಿಸಿ ಉಂಡು ದಣಿದ ಅವರು ಬೇಗ ಮಲಗಿದರೆ ಮತ್ತೆ ಎಳುವದು ಬೆಳಿಗ್ಗೆಯೇ.
ಅದೊಂದು ದಿನ ಮೊಬೈಲ್ ರಿಂಗ್ ಆಯಿತು. ಹೆಡ್ ಕಾನ್ಸ್ಟೇಬಲ್ ಎತ್ತಿ ಆನ್ ಮಾಡಿ ಸಾಹೇರಿಗೆ ಕೊಟ್ಟ. ಜಾಸ್ತಿ ಮಾತಾಡದ ಅವರು "ಗುಡ್ಡ್. ವ್ಹೆರಿ ವ್ಹೇರಿ ಗುಡ್. ಸರಿ, ಸರಿ ಮಾಹಿತಿಗಾಗಿ ಕಾಯುತ್ತಿರುತ್ತೆವೆ"
ಅಂತ ಕಟ್ ಮಾಡಿಟ್ಟರು.ಅವರ ತುಟಿಗಳಲಿ ನವಿರಾದ ನಸುನಗು ಆವರಿಸಿತ್ತು. ಕುತೂಹಲದಿಂದ ನಿಂತ ಪೆದೆಯತ್ತ ನೋಡಿದ ಸಾಹೇಬರು ಟೀ ತರಲು ಆದೇಶಿಸಿದರು.ತಲೆ ಕೆರೆಯುತ್ತಲೇ ಆತ ಹೊರಗೋಡಿದ್ದ.
ಆ ಮನೆಯಲ್ಲಿ ಇನ್ನೂ ದುಃಖ ಮಡುಗಟ್ಟಿದೆ. ಅದು ಅಷ್ಟು ಬೇಗ ಮರೆಯುವಂಥಹದಲ್ಲ.ಸೋಮಲಾ ಸತ್ತಾಗಿನಿಂದಲೂ ಲಾವಣ್ಯ ತಾ ವಾಸವಿದ್ದ ಮನೆಗೆ ಹೋಗಲೇ ಇಲ್ಲ. ಈಗ ತಿಥಿ ಕಾರ್ಯ ಹತ್ತಿರ ಬಂತಲ್ಲ, ಸ್ವಚ್ಛತೆ ಮಾಡಬೇಕು. ಆದರೆ ಲಾವಣ್ಯಳಿಗೆ ಅಲ್ಲಿಗೆ ಹೋಗಲು ಮನಸ್ಸೇ ಆಗಲೊಲ್ಲದು.
" ಅಕ್ಕಾ ಆ ಮನಿಗೆ ಹೋಗಾಕ ಮನಸಿಲ್ಲವ್ವ. "
ಲಾವಣ್ಯ ದುಗುಡದಿಂದ ಹೇಳಿ ಬಿಕ್ಕಳಿಸಿದಾಗ, ದಾನಮ್ಮನೂ ಅದಕ್ಕೆ ಹೊರತಾಗಲಿಲ್ಲ. ಇಬ್ಬರೂ ಪತಿಯ ನೆನದು ಹಾಡ್ಯಾಡಿ ಅಳಲಾರಂಭಿಸಿದರು.ಅಪ್ಪ ಸತ್ತ ನಂತರ ಮನೆಯಲ್ಲಿ ನಿತ್ಯವೂ ಇದೇ ಗೋಳಾಗಿತ್ತು.ಅದೇ ಹೊತ್ತಿಗೆ ಅಲ್ಲಿಗೆ ಬಂದ ರಾಮ ಗದರಿದ್ದ. 
" ಇನ್ನು ಎಷ್ಟು ದಿನ ಗೋಳಾಡತಿರಿ? ಅಪ್ಪ ಬಿಟ್ಟು ಹೋಗಿ ನಮ್ಮನ್ನ ಪರದೇಶಿ ಮಾಡಿದ. ಈಗ ನೀವೂ ಅವನ ಹಾದಿ ಹಿಡಿಬೇಕಂತ ಮಾಡಿರೇನು?"
"ರಾಮಾ, ನನ್ಮಗನೇ, ನಿಮ್ಮಪ್ಪಗ ನಿಂದೇ ಚಿಂತೆ ಇತ್ತೋಯಪ್ಪಾ, ನೀ ಮದಿಯಾಗಲಿಲ್ಲ. ನಿನಗಿಂತ ಕಿರಿಯರ ಮದ್ವಿಯಾಗಿ ಮಕ್ಕಳೂ ಆದರು."
ದಾನವ್ವಳ ಮಾತಿಗೆ ಮತ್ತೆ ಸಿಡಿದ ಆತ ಅಲ್ಲಿಂದ ಎದ್ದು ಹೊರಬಂದು ಬಿಟ್ಟ. 
"ಇರಲಿ ಬಿಡಕ್ಕ, ಅವನ ಮನಸಿನ್ಯಾಗ ಎನೈತೋ!! ಚಿಂತೆ ಮಾಡಬ್ಯಾಡ"
ಅಂತ ಲಾವಣ್ಯ ಅಕ್ಕನನ್ನು ತೆಕ್ಕಿ ಬಡದು ರಂಭಿಸಿದಳು. ಮತ್ತೆ ತನ್ನ ತಾ ಸಂಬಾಳಿಸಿಕೊಂಡ ಲಾವಣ್ಯ ಸೆಟಗೊಂಡು ಹೊರ ನಡೆದ ರಾಮನನ್ನು ಹುಡುಕಿ ಬಂದು ಅವನನ್ನು ಎದೆಗಪ್ಪಿಕೊಂಡು ಕಣ್ಣೀರಾಗಿ ಸ್ವಾಂತನ ಹೇಳೋದು ನೋಡಿ ದಾನವ್ವನ ಹೃದಯ ತುಂಬಿ ಬಂತು. ಹಡೆದವ್ವನಕಿಂತಲೂ ಹೆಚ್ಚಿನ ವಾತ್ಸಲ್ಯ ತನ್ನ ಮಕ್ಕಳಿಗೆ ತೋರುವ ಸವತಿಯ ವರಸೆಗೆ ಕಣ್ಣು ತುಂಬಿ ಬಂತು.ನಿಜವಾಗಿಯೂ ಆಕೆ ಸವತಿಯಲ್ಲನಿಸಿತು.
"ಯಕ್ಕಾ ಹುಡುಗ ಭಾಳ ನೊಂದಾನಬೇ. ಆ ಮನಿಗೆ ಇಬ್ಬರೂ ಹೋಗಿ ಬರತೇವಿ. ಮನಸ್ಸು ತುಸಾ ಹರವಾಳ ಆದಿತ್ತು."
ಅಂತ ದಳದಳಿಸಸುವ ಕಣ್ಣ ನೀರು ಸೆರಗಿನಿಂದ ಒರೆಸಿಕೊಳ್ಳುತ್ತ, ಅವಳ ಉತ್ತರಕ್ಕೂ ಕಾಯದೆ ಅವನ ಕೈಹಿಡಿದು ನಡೆದಳು. ದಾನಮ್ಮ ನಿರ್ವೀಕಾರವಾಗಿ ನೋಡುತ್ತಾ ನಿಂತಳಷ್ಟೆ.
ಬಂದೇ ಬಿಟ್ತು ಸೋಮಲಾ ಸತ್ತ ಹದೀಮೂರನೇ ದಿನ. ಅವತ್ತು ಸತ್ತ ಆತ್ಮಕ್ಕೆ ಶಾಂತಿ ಕೋರಿ ದೈವದಲ್ಲಿ ಹಾಕಿಕೊಳ್ಳುವ ದಿನ. ಬಹಳ ಜನ ಬರಲಿಲ್ಲ ಅಂದರೆ ಇವರೇ ಕರೆಯಲಿಲ್ಲ. ಈಗ ಇಡೀ ಜಗತ್ತಿನಲ್ಲಿ ಕೊರೋನಾ ವೈರಸ್ ಹರಡಿತ್ತಲ್ಲಾ, ಸರಕಾರದ ಆದೇಶದಂತೆ ಮನೆ ಮಂದಿಯಷ್ಟೇ ಕೂಡಿತ್ತು. ಇಂಥಾದರಲ್ಲಿ ಈ ರಾಮ ಅದೆಲ್ಲಿ ಹೊರಟು ಹೋದನೋ!! ಎಷ್ಟು ಕಾದರೂ, ಪತ್ತೆ ಇಲ್ಲವಾದ. ಕಾದು ಸಾಕಾಗಿ ಹೋಯಿತು. ಬೇರೆ ದಾರಿ ಕಾಣದೆ ಅನಿವಾರ್ಯವಾಗಿ ಅವನಿಲ್ಲದೆ ಪೂಜಾ ಕೈಂಕರ್ಯ ಮುಗಿಸಲಾಯಿತು. ಇದನ್ನು ಬಿಡುವ ಹಾಗೂ ಇರಲಿಲ್ಲವಲ್ಲ.
ಸಂಜೆ ಆಯಿತು, ರಾತ್ರಿ ಮುಗಿದು ಬೆಳಗು ಹರಿಯಿತು, ಮತ್ತೆ ಸಂಜೆ ಹಣಕಿತು, ರಾಮನ ಪತ್ತೆಯೇ ಇಲ್ಲ. ಮತ್ತೆ ಮನೆಯಲ್ಲಿ ಕೋಲಾಹಲ, ಊರಿನಲ್ಲಿ ಈ ಸುದ್ದಿ ಸ್ಪೋಟ. ಮತ್ತೆ ಪೋಲಿಸರು ಧಾವಿಸಿ ಬಂದರು. ಊರೆಲ್ಲ ಹುಡುಕಿದರು. ಸಿಕ್ಕ ಸಿಕ್ಕಲ್ಲಿ ಜಾಲಾಡಿದರು. ಆದರೆ, ಕಾಣೆಯಾದ ರಾಮ ಸಿಗಲೇ ಇಲ್ಲ. ಹೀಗೆ ಮೂರ್ನಾಲ್ಕು ದಿನ ಕಳೆದುಹೋಯಿತು. ಮನೆ ಮಂದಿ ತಲ್ಲಣಿಸಿ ಹೋದರು. ಈಗ ಮಳೆಗಾಲ ಇದ್ದದ್ದರಿಂದ ಮಳೆ ಮುಗಿಲು ಹರಿದು ಬೀಳುವ ಹಾಗೆ ಅಬ್ಬರಿಸಿ ಜಡಿಯಲಾರಂಭಿಸಿತ್ತು. ಹುಡುಕಾಟಕ್ಕೆ ಅದು ತಡೆಯೊಡ್ಡಿದ್ದರಿಂದ ಮತ್ತೆ ಎಂಟು ದಿನ ತಡವಾಯಿತು. 
ವಯಸ್ಸಿನ ಹುಡುಗ ಕಣ್ಮರೆಯಾಗುವದೆಂದರೇನು ಅಂತ ಸವತಿಯರಿಬ್ಬರೂ ಗೋಳಿಟ್ಟರು.ಲಾವಣ್ಯಳ ಸಂಕಟ ನೋಡಲಾಗದಾಗಿತ್ತು.ಯಾಕೆಂದರೆ ಸೋಮಲಾ ಇದ್ದಾಗಲೂ, ಸತ್ತ ನಂತರವೂ ರಾಮ ಸದಾ ಅವಳಿಗಂಟಿಕೊಂಡೇ ಇರುತ್ತಿದ್ದ. 
ಇದರ ಮರುದಿನವೇ ತಲೆ ಕೆಟ್ಟು ಕೆರವಾಗಿ ಕುಳಿತ ಸಾಹೇಬರ ಮೊಬೈಲ್ ರಿಂಗಣಗೊಂಡಿತು. ರಿಸಿವ್ ಮಾಡಿ ಕಿವಿಟ್ಟರು. ಅಷ್ಟೇ ಬೆಚ್ಚಿ ಎದ್ದು ನಿಂತರು. ಜೀಪೇರಿ ಬರ್ರನೆ ಹೊರಟು ಬಿಟ್ಟರು. ಕೆಲ ಪೋಲೀಸ್ ಫಟಫಟಿಗಳೂ ಹಿಂಬಾಲಿಸಿ ಹೊರಟವು.
ಅದು ಮುಳ್ಳು ಕಂಟಿಯ ದುರ್ಗಮ ಜಾಗ. ಗುಡ್ಡದ ತುದಿಯಲ್ಲಿನ ಪುಟ್ಟ ಗವಿಯ ಒಳಗಿನಿಂದ ಬಂದ ಕೆಟ್ಟ ನಾತಕ್ಕೆ ಪೋಲಿಸರು ಮೂಗು ಮುಚ್ಚಿಕೊಂಡರು. ದನ ಮೇಯಿಸುವವರು ತಂದ ಸುದ್ದಿ ಯಾಗಿತ್ತದು. ಹತ್ತಿರ ಹೋದ ಪೋಲಿಸರು ದಂಗಾದರು. ತಕ್ಷಣ ದಾನವ್ವಳನ್ನು ಕರೆಸಿಕೊಂಡು, ಹೆಣ ಗುರುತಿಸುವಂತೆ ಹೇಳಿದಾಗ ಆಕೆ ಅಲ್ಲಿ ಬಿದ್ದ ಹೆಣ ಕಂಡು ಲಬೋಲಬೋ ಬಡಿದುಕೊಳ್ಳುತ್ತ 
"ಅಯ್ಯೋ ಮಗನೇ" ಅಂತ ಕಿರುಚಿ ನೆಲಕ್ಕೆ ಬಿದ್ದು ಹೊರಳಾಡಹತ್ತಿದಳು. ಜೊತೆ ಬಂದಿದ್ದ ಲಾವಣ್ಯ ತತ್ತರಿಸಿ ಹೋದಳು. ಅದು ರಾಮನದೇ ಹೆಣವಾಗಿತ್ತು. ಮೊದಲೇ ಪ್ರೀಯಕರನನ್ನು ಕಳೆದುಕೊಂಡು ಅರೆಜೀವವಾಗಿದ್ದ ಲಾವಣ್ಯ, ಮಗನ ರೂಪದಲ್ಲಿದ್ದ ರಾಮನನ್ನು ಆ ಸ್ತಿಥಿಯಲ್ಲಿ ಕಂಡು ತತ್ತರಿಸಿದಳು.ತಾ ಹೆರದಿದ್ದರೂ ಸವತಿಯ ಮಕ್ಕಳಲ್ಲಿ ಮಾತ್ರ ವಾತ್ಸಲ್ಯ ತೋರಿಸಿ ಕಂಡ ಕನಸು ಹೀಗೆ ಬರ್ಬಾದಿ ಆಗಿ ಹೋಯಿತಲ್ಲಾ ಅಂತ ಮುಗಿಲಿಗೇ ಮಾರಿ ಮಾಡಿ ರೋಧೀಸುವ ಅವಳನ್ನು ಈಗ ದಾನವ್ವಳೇ ಸಮಾಧಾನಿಸುವ ಪರಸ್ತಿಥಿ ಬಂತು.
ಮುಖ ಗುರುತು ಹತ್ತದಂತೆ ಹಾಳಾಗಿತ್ತು. ಆದರೆ ಮೈಮೇಲಿನ ಬಟ್ಟೆ ಗುರುತಿಸುವಂತೆ ಮಾಡಿತ್ತು.ಈಗಾಗಲೇ ಆರೇಳು ದಿನವಾಗಿದ್ದರಿಂದ ಹೆಣ ಗಬ್ಬು ವಾಸನೆಯಿಂದ ಕೂಡಿತ್ತು. ಅದು ಭಯಂಕರ ರೂಪದ ಕೊಲೆ ಆಗಿತ್ತು. ಮಹಜರು ಮಾಡಿ ಎಲ್ಲಾ ಕ್ರೀಯಾಕರ್ಮ ಮುಗಿಯುವಷ್ಟರಲ್ಲಿ ಲಾವಣ್ಯಳ ಆರೋಗ್ಯದಲ್ಲಿ ಎರುಪೇರು ಆಗಿಹೋಯಿತು. ಅವಳ ದೇಹ ಸ್ತಿಥಿ ತೀರಾ ಹದಗೆಟ್ಟು ಹೋಯಿತು. ಊರಿನಿಂದ ಬಂದಿದ್ದ ಅವಳ ಅಣ್ಣ, ಎರಡು ಊರಿಗೆ ದಿನ ಕರೆದೊಯ್ಯುತ್ತನೆ ಅಂತ ಹೇಳಿ ಗಾಡಿ ಮಾಡಿ ಕರೆದುಕೊಂಡು ಹೋದ. ಸೋಮಲಾ ಸತ್ತ ನಂತರ ಆಕೆ ರಾಮನ ಸಲುವಾಗಿ ಜೀವ ಹಿಡಿದುಕೊಂಡಿದ್ದಳು.ಈಗ ಅವನೂ ಹೀಗಾದಾಗ ಆಕೆಗೆ ಆಘಾತ ತಡೆದುಕೊಳ್ಳಲಾಗಲಿಲ್ಲ. ಜಾಗ ಬದಲಾವಣೆ ಆದರೆ ಹುಶಾರಾಗಬಹುದು ಅಂತ ಕರೆದೊಯ್ಯಲಾಯಿತು.
ಈ ಮೂರನೇಯ ಕೊಲೆಗೆ ಪೋಲಿಸರ ಪಾಡು ನಾಯಿ ಪಾಡಾಗಿ ಹೋಯಿತು. ಸುತ್ತ ಮುತ್ತಲಿಂದ ಬೈಗುಳಗಳನ್ನು ಕೇಳಿ ಕೇಳಿ ಸುಸ್ತು ಹೋಡೆದರು. ಯಾವದೋ ಸಂದಿಯಲ್ಲಿದ್ದ ಈ ಸಣ್ಣ ಊರು ದಿಲ್ಲಿ ಮುಟ್ಟಿತ್ತು. ಜನರ ಆಕ್ರೋಶ ಮುಗಿಲು ಮುಟ್ಟಿತ್ತು. ಆರೋಪಿಗಳನ್ನು ಕಂಡು ಹಿಡಿಯುವಲ್ಲಿ ವಿಫಲವಾದ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಜನ ದೊಡ್ಡ ಗದ್ದಲದ ಹೂಯಿಲೆಬ್ಬಿಸಿದಾಗ ಸರಕಾರ ಗಡಗಡಿಸಿತ್ತು. ತಕ್ಷಣ ಕರ್ಪ್ಯೂ ಜಾರಿಯಾಯಿತು. ಪತ್ರಿಕಾ ಗೋಷ್ಠಿ ನಡೆದವು.ಸ್ವಥಹ ಮುಖ್ಯ ಮಂತ್ರಿಗಳು ಇಲ್ಲಿಗೆ ಬರುವಂತಾಯಿತು. ಒತ್ತಾಯದ ಹೇರಿಕೆಗಳಿಂದ ಪೋಲಿಸ್ ಇಲಾಖೆ ಮತಿ ಕಳೆದುಕೊಂಡಿತ್ತು. ಮತ್ತೆ ದಿನಕಳೆದು ಹೋದವು.
ಹೀಗಿರುವಾಗ ಆ ದಿನ ಮತ್ತೆ ಫೋನ್ ರಿಂಗ್ ಆಯಿತು. ಆನ್ ಮಾಡಿ ಕಿವಿಗ್ಹಿಡಿದ ಸಾಹೇಬರ ಕಣ್ಣು ಅಗಲವಾದವು. ಕೈ ಮೀಸೆ ತೀಡಿಕೊಂಡವು.
ಅದು ಅಪರಾತ್ರಿ ಸಮಯ. ವಾಹನವಿಲ್ಲದೆ ಊರಿನಿಂದ ಆಣತಿ ದೂರದ ತೋಟದ ಮನೆಯತ್ತ ಪೋಲೀಸರು ಧಾವಿಸಿದರು.ಕಿಲೋ ಮೀಟರ್ ದೂರದಲ್ಲಿ ಪೋಲೀಸರು ಕಣ್ಣಿಗೆ ಎಣ್ಣೆ ಬಿಟ್ಟು ತೋಟದ ಆ ಒಂಟಿ ಮನೆಯತ್ತ ದೃಷ್ಟಿ ನೆಟ್ಟು ಕುಳಿತಿದ್ದಾರೆ.ನಿಶಬ್ದ ವಾತಾವರಣದಲ್ಲಿ ಕೀಟಗಳು ಚಿರ್ ಚಿರ್ ಮಾಡುತ್ತಿವೆ. ಗೂಗೆ ಬಾವಲಿಗಳ ಹಾರಾಟ, ಒದರಾಟ ಸಹಿಸದಾಗಿತ್ತು. ಆದರೆ ಇವತ್ತು ಆ ರಹಸ್ಯ ಭೇಧಿಸಲೇ ಬೇಕಿತ್ತು. ಇಲ್ಲವಾದರೆ ತಮಗೆ ಉಳಿಗಾಲ ಇಲ್ಲದೆಂದು ಹಲ್ಲು ಗಟ್ಟರಿಸಿ ಕುಳಿತಿದ್ದಾರೆ.ಕಾದೂ ಕಾದೂ ತೂಕಡಿಕೆ ಬಂದರೂ, ಕಷ್ಟಪಟ್ಟು ಕಣ್ಣಗಲಿಸಿ ಕುಳಿತರು. ಕೊನೆಗೂ ಅವರ ತಪಸ್ಸು ಫಲಿಸಿತು ಆ ಮನೆಯತ್ತ ಒಂದು ಮನುಷ್ಯಾಕೃತಿ ಅತ್ತಿತ್ತ ನೋಡುತ್ತ ಗಡಬಡವಾಗಿ ಹೋಗುವದು ಕಂಡಾಗ ಜಾಗೃತರಾದರು. ಅದೇನು ಸೂಚನೆ ಆಯಿತೋ, ದೀಪವಿಲ್ಲದ ಆ ಮನೆ ಬಾಗಿಲ ಒಂದು ಫಡಕು ತೆರೆದು ಕೊಂಡಿದ್ದು ಚಂದ್ರನ ಅಷ್ಪಷ್ಟ ಬೆಳಕಲ್ಲಿ ಕಂಡಿತು. ಆ ಗಂಡು ದಿರಿಸಿನ ಆಕೃತಿ ಪಟ್ಟನೇ ಒಳ ತೂರಿಕೊಳ್ಳುತ್ತಲೇ ಮತ್ತೆ ಬಾಗಿಲು ಮುಚ್ಚಿಕೊಂಡಿತು.
ಮನೆಯಲ್ಲಿ ದೀಪ ಉರಿಯುವದು ಕಿಟಕಿಯ ದಪ್ಪ ಪರದೆಯಲ್ಲಿ ಸರಿಯಾಗಿ ಕಂಡಿರಲಿಲ್ಲ. ಪೋಲಿಸರು ಹತ್ತಿರ ಹೋದಾಗ ಅರಿವಾಯಿತು. ಆದರೆ ಅಲ್ಲಿನ ನಾಯಿ ಇವರಿಗೆ ತೋಡಕಾಯಿತು. ಎಲ್ಲಾದಕ್ಕೂ ಸಿದ್ದರಾಗಿ ಬಂದಿದ್ದ ಅವರು ಅದಕ್ಕೆ ಮಾದಕ ತುಂಬಿದ ಬಿಸ್ಕತ್ತುಗಳನ್ನು ಎಸೆದರು. ಅದನ್ನು ತಿಂದ ನಾಯಿ ನಿದ್ದೆ ಹೋಯಿತು. 
ನಾಯಿಯ ಬೊಗಳಿದ ಸದ್ದಿಗೆ ಮತ್ತೆ ಆ ಬಾಗಿಲು ಅರ್ಧ ತೆರೆದುಕೊಂಡಾಗ ಅದನ್ನೇ ಕಾಯುತ್ತಾ ಇದ್ದ ಪೋಲೀಸರು ಒಮ್ಮೆಲೇ ಎರಗಿ ಆ ವ್ಯಕ್ತಿಯನ್ನು ಹಿಡಿದರು. ಒಳ ನುಗ್ಗಿದಾಗ ಅಲ್ಲಿದ್ದವರ ಕಂಡು ದಂಗಾದರು. ಹಿಡಿತಕ್ಕೆ ಸಿಕ್ಕಿದವನನ್ನು ಕಂಡು ಬೆಚ್ಚಿಬಿದ್ದರು. 
ಎಲ್ಲಾರನ್ನು ಬಂಧಿಸಿ ಎಳೆದು ಠಾಣೆಗೆ ತರುವ ಮುಂಚೆ.ಆ ಮನೆ ಶೋಧಿಸಿದರು., ಅಷ್ಟು ಹುಡುಕಿದರೂ ಸಿಗದ ಸೋಮನ ಡೈರಿ, ಆ ಚಂದದ ವ್ಯಾನಿಟಿ ಬ್ಯಾಗಿನಲ್ಲಿ ಸಿಕ್ಕಾಗ ಅಚ್ಚರಿಯ ಶಿಖರವೇರಿದರು. ಅವರಿಗೇನು ಗೊತ್ತು ಅಲ್ಲೊಬ್ಬ ಕೇಡಿ ಹೆಂಗಸಿದ್ದಾಳು ಅಂತ.ಹಾಗಾಗಿ ಮಹಿಳಾ ಸಿಬ್ಬಂದಿ ಬಂದಿರಲಿಲ್ಲ. ಅನಿವಾರ್ಯವಾಗಿ ಪುರುಷ ಸಿಬ್ಬಂದಿಯೇ ಆಕೆಯನ್ನು ಎಳೆದು ತರಬೇಕಾತು.
ಮರುದಿನ ಕೊಲೆಗಡುಕರು ಸಿಕ್ಕ ಸುದ್ದಿ ತಲಪುತ್ತಲೇ ಜನರ ಕುತೂಹಲಕ್ಕೆ ಕೊನೆಯೇ ಉಳಿಲಿಲ್ಲ. ಠಾಣೆಯಿಂದ ಕರೆ ಬಂದಾಗ, ದಾನವ್ವ ಆತುರದಿಂದ ಲಾವಣ್ಯಳ ಕೂಗಿ ಕರೆದಳು. ನಂತರ ನೆನಪಾಗಿ, ಅಯ್ಯೋ ಎಂದುಕೊಂಡಳು. ನಿನ್ನೆ ತಾನೆ ತನ್ನ ತಾಯಿಗೆ ಹುಷಾರಿಲ್ಲ ಅಂತ ಊರಿಗೆ ಹೋದದ್ದು ನೆನಪಾತು. ಫೋನಾದರೂ ಮಾಡುವ ಅಂತ ನಂಬರ್ ಒತ್ತಿ ಒತ್ತಿ ಸೋತಳು. ಸ್ವಿಚ್ ಆಫ್ ಆಗಿತ್ತು. ಇರುವ ಮಕ್ಕಳೊಂದಿಗೆ ಧಾವಿಸಿ ಸ್ಟೇಷನ್ನಿಗೆ ಬಂದಳು. ಪೋಲಿಸರು ಆರೋಪಿಗಳಿದ್ದ ಶಲ್ಲಿನತ್ತ ಕರೆದೊಯ್ದಿದ್ದು ನಿಲ್ಲಿಸಿದರು. ಅಷ್ಟೇ ಅವರನ್ನು ನೋಡಿದ ದಾನಮ್ಮ ಹುಚ್ಚಿಯಾದಳು.
"ಇಲ್ಲ, ಇಲ್ಲ,,ಸುಳ್ಳು, ಸುಳ್ಳು. ಇವರು ಅವರಲ್ಲ. ಅವರಲ್ಲ "
ಅಂತ ಬಡಬಡಿಸಲಾರಂಭಿಸಿದಳು. ಆದರೆ ಅದು ನಿಜ ಹಕಿಕತ್ತು ಆಗಿತ್ತು. ಆರೇಳು ದಾಂಡಿಗರು ಮತ್ತು ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ತೊಟ್ಟು ನಿಂತಾಕೆಯ ಅವತಾರಕೆ ದಾನವ್ವ ಬೆಚ್ಚಿ ಬಿದ್ದಳು. ಅವಳ ಜತೆ ಶಾಲೆಯ ಗಾರ್ಡ ಮತ್ತು ಊರಿನ ಗೌಡರೂ ನಿಂತದ್ದು ಕಂಡ ಆಕೆಯ ತಲೆ ಗಿಮ್ಮೆಂದಿತ್ತು.
ಅದಾಗಲೇ ಸಿಕ್ಕ ಆ ಡೈರಿ ಕಥೆ ಬಿಚ್ಚಿತ್ತು.ಆಸ್ತಿ ಕಬಳಿಸಲೆಂದೆ ಅಪ್ಪನ ವಯಸ್ಸಿನ ಸೋಮಲಾ ಜೊತೆ ಓಡಿ ಬಂದ ಆಕೆ, ರಕ್ತ ಚಿಮ್ಮುವ ಹಾಗಿದ್ದ ಚಲುವ ತರುಣ ಸುಂದರ ರಾಮನನ್ನು ತನ್ನ ದೈಹಿಕ ಸುಖಕ್ಕಾಗಿ ಬಳಸಿಕೊಂಡದ್ದನ್ನು ಕಣ್ಣಾರೆ ಕಂಡ ಸೋಮಲಾ ಅಘಾತಗೊಂಡಿದ್ದ. ಹೇಸಿಗೆಯಿಂದ ಅವಳಿಂದ ದೂರ ಸರದಿದ್ದ.ಚುನಾವಣೆಯ ಈ ದಿನಗಳಲ್ಲಿ ಹೆಸರು ಕೆಡಬಾರದು ಅಂತ ಮರ್ಯಾದೆಗಂಜಿದ ಅವನು ಅವಳಿಗೆ ತನ್ನ ತೊರೆದು ಹೊರಟು ಬಿಡುವಂತೆ ಹೇಳಿದ್ದ. ಆದರೆ ಅಷ್ಟರಾಗಲೇ ಅವಳು ಅರ್ಧ ಆಸ್ತಿ ತನ್ನ ಹೆಸರಲ್ಲಿ ಮಾಡಿಸಿಕೊಂಡು ಆಗಿತ್ತು. ಈಗ ಉಳಿದ ಆಸ್ತಿಯೂ ಬೇಕು ಅಂತ ನಿಂತಳು. ಯಾರಿಗೂ ಗೊತ್ತಿಲ್ಲದ ವಿಷಯ ಊರಿಗೆ ಗೊತ್ತಾಗುವಂತೆ ಮಾಡುವೆ ಅಂತ ಬ್ಲಾಕ್ ಮೇಲ್. ಮಾಡಲಾರಂಭಿಸಿದ್ದಳು. ಇವಳ ಜತೆ ರಾಮನೂ ಕೈ ಜೋಡಿಸಿ ನಿಂತಾಗ ತತ್ತರಿಸಿದ್ದ. ಪಶ್ಚಾತಾಪ ಅವನನ್ನು ನೆಮ್ಮದಿಯಿಂದ ಇರಗೊಡಲಿಲ್ಲ. ಈಗ ತನ್ನ ಉಳಿಗಾಲವಿಲ್ಲ ಅಂತ ತಳಮಳಿಸಿದ್ದ. ಮಾನ ಹೋದ ಮೇಲೆ ಬದುಕಿ ಫಲವಿಲ್ಲಂತನಸಿತ್ತು. ಅದರಲ್ಲೂ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಮಾತಿನಿಂದ ಪರಿವರ್ತನೆ ಗೊಂಡ ಮನ ತಾ ಮಾಡಿದ ತಪ್ಪೇನು ಅಂತ ಮತ್ತೆ ಮತ್ತೆ ಎತ್ತಿ ತೋರಿಸಿದಾಗ, ನಿರ್ಧಾರ ಗಟ್ಟಿಯಾಗಿತ್ತು. ತಪ್ಪು ಅಂದರೆ ಎಂಥಾ ಶಿಕ್ಷೆ ಅಂತ ತಿಳಿಸಲು ಸೋಮಲಾ, ಈ ಡೈರಿಯ ಮೊರೆ ಹೋಗಿದ್ದಾ. 
ಆದರೆ ದುರದೃಷ್ಟವಶಾತ್ ಅದೊಂದು ದಿನ ಇದು ಗಾರ್ಡ ಮಸಲತ್ತಿನಿಂದ ಅವಳ ಕೈಗೆ ಸಿಕ್ಕಿತ್ತು. ಅಷ್ಟೇ. ತಡವೇ ಮಾಡಲಿಲ್ಲ. ರಾಮನಿಂದಲೇ ಅವನ ಅಂತ್ಯ ಹಾಡಿದ್ದಳು.
ಮುಂದಿನ ಕಥೆ ಲಾವಣ್ಯ ಉದುರಿಸಿದಳು. 
ಇವಳೊಬ್ಬ ಸುಪಾರಿ ಹಂತಕರ ಗ್ಯಾಂಗಿನವಳು. ಇಂಥಹ ಕೊಲೆ ಸುಲಿಗೆ ಸಹಜವಾಗಿತ್ತಾಕೆಗೆ. ಇಲ್ಲಿ ಬಂದ ಮೇಲೆ ರಾಮನನ್ನೇ ಬುಟ್ಟಿಗೆ ಹಾಕಿಕೊಂಡಳು.ಅವನು ಮದುವೆ ಆಗದಂತೆ ತನ್ನ ತಾನು ಅವನಿಗೆ ಸಮರ್ಪಿಸಿದ್ದಳು. ಇದು ತಂದೆ ಮಕ್ಕಳ ವಿಕನೆಸ್ ಗೆ ಕಾರಣ ಆಯಿತು. ಈ ಮೊದಲೇ ಇರ್ಷೆ ತುಂಬಿದ ಗೌಡರ ಕುಮ್ಮಕ್ಕು ರಾಮನಿಗಿತ್ತು. ರಾಮನ ಚಟ, ಅಪ್ಪನ ಹಟ ತಿಳಿದುಕೊಂಡ ಘಾತುಕ ಮನುಷ್ಯ, ನೀನು ನಿಮ್ಮಪ್ಪನ ಸ್ಥಾನ ತುಂಬೇಕಾದರೆ ನಾ ಹೇಳೋದು ಮಾಡಬೇಕು ಅಂತ ತಲೆ ತುಂಬಿದ್ದ. ಮೊದಲೇ ಕಟ್ಟುನಿಟ್ಟಾಗಿದ್ದ ಅಪ್ಪ ಈಗ ಪ್ರತಿಷ್ಪರ್ದಿಯಾದ ಅಂತನಸಿತು. ಇಬ್ಬರೂ ಹಾವು ಮುಂಗುಸಿಯಾದರು. 
ಅವಳ ಆಮಿಷಗಳು, ಅವಳ ಮಾದಕ ಚಲುವು ಇವನಲ್ಲಿನ ಮನುಶತ್ವವನ್ನೇ ಸಾಯಿಸಿದ್ದವು. 
ಆದರೆ ಅದೊಂದು ದಿನ ತನಗೂ ಆಕೆ ನೀಯತ್ತಾಗಿಲ್ಲ ಅಂತ ತಿಳಿದಾಗ ರಾವಣನಾಗಿದ್ದ. ಕಾಣಬಾರದ್ದನ್ನು ಕಂಡಿದ್ದಷ್ಟೇ ಹುಚ್ಚನಾಗಿದ್ದ. ಅಂದು ರಾಜಣ್ಣನ ತೆಕ್ಕೆಯಲ್ಲಿ ಈ ಲಾವಣ್ಯ ಬಿದ್ದದ್ದು ತಿಳಿಯುತ್ತಲೇ ಊರಿಗೆ ಆ ತರಕಾರಿ ವ್ಯಾಪಾರಿಯ ಎಂಟ್ರೀಯಾಗಿತ್ತು. ಅವನು ಸಾಮಾನ್ಯನಾಗಿರಲಿಲ್ಲ. ಇಂಥಹ ಕ್ರುಕೃತ್ಯಳ ಮಾಷ್ಟರ ಮೈಂಡ್. ಇಂಟ್ರನ್ಯಾಶನಲ್ ಅಂಡರವೆಲ್ಡ್ ಕೇಡಿಯಾಗಿದ್ದ. ಅಷ್ಟೇ ರಾಮ ಫಿನಿಷ್. ಮಳೆ ಬಂದು ಈ ಕೇಡಿಗಳಿಗೆ ಅನೂಕೂಲವಾಗಿತ್ತು. ಅವಳು ನೆವ ಹೇಳಿ ಊರಿಗೆ ಹೋಗುವ ಪ್ಲಾನ್ ಮಾಡಿ ಸುಪಾರಿ ಕೋಟ್ಟ ಗೌಡನ ತೆಕ್ಕೆಯಲ್ಲಿದ್ದಳು. ಇನ್ನೇನು ಓಡಿ ಹೋಗುವದರಲ್ಲಿರುವಾಗಲೇ ಪೋಲಿಸರ ಕೈಸೆರೆಯಾಗಿದ್ದಳು. 
ಪೋಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿದ್ದ ಆ ಕ್ರೂರ ಕೇಡಿಯ ಎಂಟ್ರಿ ಈ ಊರಿನಲ್ಲಿ ಆದಾಗಲೇ ಗುಪ್ತಚರರಿಗೆ ಶಂಕೆ ಆಗಿಹೋಗಿತ್ತು. ಆದರೆ ಸರಿಯಾದ ಸಮಯಕ್ಕಾಗಿ ಹೊಂಚು ಹಾಕಿದ್ದರು.ಲಾವಣ್ಯ ಎಂಬ ಈ ಲಲನೆ ಅವನ ಕೇಡಿತನದ ಕೆಲಸದ ಅಸ್ತ್ರವಾಗಿದ್ದಳು. ಇವಳು ಈ ಊರಿಗೆ ಸೋಮನ ಪ್ರಿಯತಮೆಯಾಗಿ ಬಂದದ್ದೇ ಇವನ ಆದೇಶವಾಗಿತ್ತು. ಅವನಿಗೆ ರಾಜಕೀಯ ಕೆಲ ನೀಚರಿಂದ ಆಗಾಗ ಬರುವ ಸುಪಾರಿ ಮರ್ಡರ್ ದಿಂದ ಸಿಗುವ ದುಡ್ಡಿಗಾಗಿಯೇ ಇವನು ಆಕೆಯನ್ನು ಮುಂದಿಟ್ಟುಕೊಂಡು ಇಂಥಹ ಎಷ್ಟೊ ಕುಕೃತ್ಯಗಳನ್ನು ಮಾಡುತ್ತಿದ್ದಾ. ಹಾಗೆಯೇ ಈಗ ಈ ಊರಿನ ಗೌಡರಿಂದ ಸುಪಾರಿ ತಗೊಂಡು ಬಂದಿದ್ದ. ತನ್ನ ಕಾಲ ಚಪ್ಪಲಿ ಬಿಡುವ ಜಾಗದಲ್ಲಿರುವ ಜನ ತನ್ನ ಮಟ್ಟಕ್ಕೆ ಬೆಳೆದು ನಿಂತಿದ್ದು ಗೌಡ ಸಹಿಸದಾಗಿದ್ದ. ತನ್ನ ಜಾತಿಯವರನ್ನು ರಾಜಕೀಯದಲ್ಲಿ ಎರಿಸುವದರಲ್ಲಿದ್ದ.. ಆದರೆ ಇವನಿಗೆ ಅದೃಷ್ಟ ಕೈಕೊಟ್ಟಿತ್ತು. ಸುಲಭವಾಗಿ ಆ ಕೇಡಿಯೊಂದಿಗೆ ಬಂಧಿಯಾಗಿ ಹೋದ.
ಇಲ್ಲಿ ಶಾಲಾ ಗಾರ್ಡನನ್ನು ತಮ್ಮ ಕೆಲಸಕ್ಕೆ ಬಳಸಿಕೊಂಡು ಮಾಡಿದ ಕೆಲವು ಕೆಲಸ ಸಕ್ಸಸ್ ಆಗಿತ್ತು. ಸೋಮಲಾನ ಒಳಗುಟ್ಟುಗಳನ್ನೂ ಇವನಿಂದ ತಿಳಿದುಕೊಂಡು ಕುಕೃತ್ಯಕ್ಕೆ ಸರಳವಾಗಿತ್ತು. ಇವತ್ತು ಆ ಕೆಲಸಕ್ಕಾಗಿ ಇನಾಮು ಕೊಡಲೆಂದೆ ಕರೆದಿದ್ದರು. ಆದರೆ ಅವನ ಅಸಹಜ ಚಲನವಲನವೇ ಪೋಲಿಸರಿಗೆ ಶಂಕೆ ಆಗಿತ್ತು. ಈ ಸಮಾಜಘಾತುಕ ಕಂಟಕರನ್ನು ಬಂಧಿಸಲೂ ನೆರವಾಯಿತು. ಇಲ್ಲವಾದರೆ ನಾಲ್ಕನೇಯ ಮರ್ಡರ್ ಬಲಿ ಇವನೇ ಆಗಿರುತಿದ್ದ..

ಇಂದುಮತಿ ಲಮಾಣಿ ವಿಜಯಪುರ ✍

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...