ಮನಸ್ಸು ವರ್ಸೆಸ್ ಮನಸ್ಸು
ಪ್ರೀತಿ ಅನ್ನೋದು ಈ ಜಗತ್ತಿನ ಒಂದು ಅದ್ಭುತ ಶಕ್ತಿ. ಈ ಜಗತ್ತಿನ ಜೀವದ್ರವ್ಯ. ಪ್ರೀತಿ ಇಲ್ಲದೇನೇ ಏನೂ ನಡೆಯೋದೇ ಇಲ್ಲ. ಅದು ಈ ಬದುಕಿನಲ್ಲಿ ಹಾಸು ಹೊಕ್ಕಾಗಿರೋ ಒಂದು ನಿರಂತರ ಮೌಲ್ಯ. ಆ ಮೌಲ್ಯವನ್ನು ತಿರಸ್ಕರಿಸುವ ಅಥವಾ ಕೀಳಾಗಿ ಕಾಣುವ ಅಧಿಕಾರ ಅಥವಾ ಹಕ್ಕು ನಮಗಿಲ್ಲ.
ಪ್ರೀತಿಯನ್ನು ಪ್ರೀತಿಯಿಂದಲೆ ಕಾಣುವ, ಅನುಭವಿಸುವ ಮನೋಭೂಮಿಕೆಯನ್ನ ನಾವು ಹೊಂದಿಲ್ಲವಾದರೆ ಅದು ನಮ್ಮ ದೌರ್ಬಲ್ಯವನ್ನು ತೋರಿಸಿಕೊಡುತ್ತದೆ.
ಪ್ರೀತಿ ಮತ್ತು ಪ್ರೀತಿಗೆ ಸಂಬಂಧಿಸಿದ ಶಬ್ದಗಳನ್ನು ಕೇಳಿದ ಮಾತ್ರಕ್ಕೆ ಮನಸ್ಸು ಮೈಲಿಗೆ ಮಾಡಿಕೊಳ್ಳುವುದು ನಮ್ಮ ಮನೋದೌರ್ಬಲ್ಯವನ್ನು ಎತ್ತಿ ಹಿಡಿಯುತ್ತದೆ.ಈ ಮನಸ್ಸಿನ ಸ್ಥಿತಿಗಳೇ ಹಾಗೆ. ಜಾಗ್ರತ ಮನಸ್ಸು ಸದಾ ಎಚ್ಚರವಾಗಿದ್ದುಕೊಂಡು ನಮಗೆ ಗರುವಾಗಿ ಮಾರ್ಗದರ್ಶನ ಮಾಡುತ್ತ ಸಾಗುತ್ತದೆ. ವಿವೇಕ ಹೇಳುತ್ತ ಹೋಗುತ್ತದೆ.ಆದರೆ ಸುಪ್ತ ಮನಸ್ಸು ಅನ್ನೊದಿದೆಯಲ್ಲ ಅದು ನಮ್ಮ ವೈಯಕ್ತಿಕ ಅಭಿಲಾಶೆಗಳ, ಅಂತರಂಗದ ಬಯಕೆಗಳ ಅಗಾಧವಾದ ಕಣಜ. ಅದು ಯಾವಾಗ ತೆರೆದುಕೊಳ್ಳುತ್ತದೆಯೋ ಗೊತ್ತಾಗಲ್ಲ. ಹಾಗೆ ತೆರೆದುಕೊಂಡಾಗ ಅದಕ್ಕೆ ಸ್ಪಂದಿಸಬೇಕು. ಹಾಗೆ ಸ್ಪಂದಿಸದೇ ಹೋದಾಗ ಅದು ಅದುಮಿಟ್ಟುಕೊಂಡ ಬಾಂಬ್ ತರಹಾ ಯರ್ರಬಿರ್ರಿಯಾಗಿ ಸ್ಫೋಟಗೊಳ್ಳುತ್ತದೆ. ಸ್ಪ್ಜೋಟಗೊಳ್ಳುವತನಕ ಅಲ್ಲಿ ಬಾಂಬ್ ಇದೆ ಅಂತಾನೇ ಯಾರಿಗೂ ಗೊತ್ತಾಗಲ್ಲ. ಸ್ಫೋಟವಾದಾಗಲೇ ಬಾಂಬ್ ಇತ್ತು ಅನ್ನೋದು ಗೊತ್ತಾಗೋದು. ಹಾಗೆ ಸುಪ್ತ ಮನಸ್ಸಿನ ಸ್ಫೋಟವೂ ಕೂಡಾ. ಮನಸ್ಸಿನ ಸ್ಥಿತಿಯೇ ಹಾಗೆ, ಕ್ಷಣ ಚಿತ್ತ ಕ್ಷಣ ಪಿತ್ತ.
ನಾವು ನಮ್ಮ ಭಾವನೆಗಳನ್ನು ಆಯಾ ಸಮಯದಲ್ಲೆ ಅಭಿವ್ಯಕ್ತಗೊಳಿಸುತ್ತ ಹೋಗ್ಬೇಕು. ಹಾಗೆ ಅಭಿವ್ಯಕ್ತಗೊಳಿಸದೇ ಹೋದಲ್ಲಿ ಅವು ಸುಪ್ತ ಮನಸ್ಸಿನಲ್ಲಿ ಮುದುರಿಕೊಂಡು ಅಸಮಾಧಾನದ ಕಿಡಿಗಳಾಗಿ ಸ್ಫೋಟಗೊಳ್ಳುವುದಕ್ಕೆ ಸರಿಯಾದ ಸಮಯವನ್ನು ಎದುರು ನೋಡುತ್ತವೆ.
ಗೆಳೆಯ ಗೆಳತಿ ಅನ್ನೋ ಶಬ್ದಗಳನ್ನು ಕೇವಲ ನೈತಿಕ, ಅಥವಾ ಸಾಮಾಜಿಕ ಬಧನಗಳ ನೆಲೆಗಟ್ಟಿನಲ್ಲಿ ಮಾತ್ರ ನೋಡಬಾರದು. ಅಲ್ಲಿ ಭಾವನಾತ್ಮಕ ಬಂಧಗಳಿರುತ್ತವೆ. ಭಾವುಕತೆಯ ನೆಲೆಗಟ್ಟಿನಲ್ಲಿ ನೋಡಿದಾಗ ಇನ್ನೊಂದು ಮನಸ್ಸಿನ ಭಾವುಕತೆಯ ಅರಿವಾಗುತ್ತದೆ. ನಮ್ಗೊಬ್ಬರಿಗೇ ಮನಸು ಅಂತ ಇರೋದಿಲ್ಲ. ಹಾಗೆ ಇನ್ನೊಂದು ಮನಸ್ಸನ್ನು ಘಾಸಿಗೊಳಿಸುವ, ಧಕ್ಕೆ ಮಾಡುವ ಯಾವ ಅಧಿಕಾರವೂ ನಮ್ಗೆ ಇರೋದಿಲ್ಲ.ಒಂದು ಮನಸ್ಸಿನ ಭಾವನೆಗಳನ್ನು ಗೌರವಿಸುವುದು ಇನ್ನೊಂದು ಮನಸ್ಸಿನ ದೊಡ್ಡತನ ಅಂತಾನೇ ಹೇಳಬೇಕು.
ಸ್ನೇಹ, ಪ್ರೀತಿ, ಅಂತಹ:ಕರಣಗಳು ಮಾನವೀಯ ಮೌಲ್ಯಗಳು. ಅವನ್ನು ಆ ಮೌಲ್ಯಗಳ ನೆಲೆಗಟ್ಟಿನಲ್ಲೆ ನೋಡಬೇಕಾಗುತ್ತದೆ. ನಾಯಿ, ಬೆಕ್ಕು, ಮೊಲ ಮೊದಲಾದ ಪ್ರಾಣಿಗಳನ್ನೇ ಪ್ರೀತಿಸಲು ಸಾಧ್ಯವಾಗುವ ನಮಗೆ ಮನುಶ್ಯರನ್ನು ಮನುಶರನ್ನಾಗಿ ಪ್ರೀತಿಸಲು ಸಾಧ್ಯವಾಗುತ್ತಿಲ್ಲ. ನನ್ನಿಂದ ಕಿಮೀ ದೂರದಲ್ಲಿರುವ ಕಾವ್ಯಳನ್ನು ಪ್ರೀತಿಸುವ ಅದೇ ಮನಸ್ಸು ನಿನ್ನನ್ನು ಪ್ರೀತಿಸುತ್ತದೆ. ಪ್ರೀತಿಗೆ ಒಂದೆ ಮುಖ ಇಲ್ಲ ಅಂತ ಅವತ್ತೇ ನಿನಗೆ ಹೇಳಿದ್ದೇನೆ.ಪ್ರೀತಿಯನ್ನು ಪ್ರೀತಿಯನ್ನಾಗಿ ಮಾತ್ರ ಸ್ವೀಕರಿಸಬೇಕು.ಅಲ್ಲಿ ಯಾವುದೇ ಕಲ್ಮಶ ಭಾವನೆಗೆ ಅವಕಾಶ ಕೊಡಬಾರದು.ಸಂಬಂಧಗಳೇ ಬೇರೆ. ಪ್ರೀತಿನೇ ಬೇರೆ. ಅವ್ವ, ಅಪ್ಪ, ಅಣ್ಣ, ತಮ್ಮ, ತಂಗಿ, ಅಕ್ಕನನ್ನು ಪ್ರೀತಿಸುವ ಅದೇ ಮನಸ್ಸು ಗೆಳೆಯ ಗೆಳತಿಯನ್ನು ಪ್ರೀತಿಸುತ್ತದೆ.ಕಚೇರಿಯಲ್ಲಿನ ಸಹೋದ್ಯೋಗಿಯನ್ನು ಪ್ರೀತಿಸುತ್ತದೆ. ಆದ್ರೆ ಪ್ರೀತಿಯ ಮುಖ ಪ್ರತಿ ಸಂದರ್ಭದಲ್ಲೂ ಬೇರೆ ಬೇರೆಯಾಗಿರುತ್ತದೆ.
ನನ್ನೊಂದಿಗೆ ೩೮ ವರ್ಷಗಳ ಹಿಂದೆ ೨ ನೇ ತರಗತಿಯಲ್ಲಿದ್ದ, ೭ ವರ್ಷದವರಿದ್ದಾಗಿನ ಆ ಪ್ರೀತಿ ಎಳೆಯ ಪ್ರೀತಿ ಮುಗ್ಧ ಪ್ರೀತಿ ಅನ್ನಿಸುತ್ತದೆ. ಅಲ್ಲಿ ಸ್ವಾರ್ಥದ ಲವಲೇಶವೂ ಇರುವುದಿಲ್ಲ. ಆದರೆ ನಾವು ಬೆಳೆಯುತ್ತ ಹೋದಂತೆ ನಮ್ಮಲ್ಲಿ ಅಹಂ, ಸ್ವಾರ್ಥ, ಒಣ ಜಂಭ, ಮತ್ತಿತರ ಜಿಗುಟು ಭಾವನೆಗಳು ಬೆಳೆಯುತ್ತ ಹೋಗುತ್ತವೆ. ಆಗ ಸುಜಾತ ಅನ್ನೊ ಹುಡುಗಿ ಜೊತೆ ಎರಡು ವರ್ಷಗಳ ಅವಧಿಯಲ್ಲಿ ಕೂಡಿ ಆಡಿದ್ದಕ್ಕಿಂತ ಜಗಳವಾಡಿದ್ದೇ ಹೆಚ್ಚು ಅಂತ ನನಗೆ ಚೆನ್ನಾಗಿ ನೆನಪಿದೆ ಗೆಳತಿ, ಆದರೂ ನನಗೆ ಬಾಲ್ಯದ ಆ ಮುಗ್ಧ ಸ್ನೇಹವೇ ನೆನಪಿದೇ ಅಂದ್ರೆ ಶುದ್ಧ ಸ್ನೇಹ ಬಿಟ್ರೆ ಬೇರೇನು ಇರೋದಕ್ಕೆ ಸಾಧ್ಯ ಹೇಳು ? ಚಿನ್ನು, ಪುಟ್ಟ, ಸ್ವೀಟ್ ಹಾರ್ಟ್, ಮೈ ಡಿಯರ್ ಮತ್ತಿತತರ ಸಾಂದರ್ಭಿಕ ಶಬ್ದಗಳನ್ನು ಆ ಸಂದರ್ಭದ ಭಾವನೆಗಳು ಎಂದು ಮಾತ್ರ ತಿಳಿದುಕೊಳ್ಳಬೇಕು. ಎಲ್ಲರ ಪ್ರೀತಿಯಲ್ಲೂ ಒಂದೇ ಮುಖ ಇರೋದಿಲ್ಲ. ಹಾಗೆ ತಿಳಿದೊಕೊಳ್ಳುವುದಾದರೆ ಅದು ಪರಿಸ್ಥಿತಿ ಮತ್ತು ಸಂದರ್ಭವನ್ನು ಎದುರಿಸಲಾಗದ ಹೇಡಿತನಕ್ಕೆ ಸಾಕ್ಷಿಯಾಗುತ್ತದೆ. ನನ್ನ ಪ್ರೀತಿಯ ಗೆಳತಿ ಅಂಥ ಹೇಡಿಯಾಗಲಾರಳು ಅಂತ ನನಗೆ ಭರವಸೆ ಇದೆ.ನಮ್ಮೊಂದಿಗೆ ಸಂಭಾಷಿಸುವ ವ್ಯಕ್ತಿಯ ಭಾವನೆಗಳನ್ನು ನಾವು ಗೌರವಿಸದೇ ಹೋದರೆ ಉತ್ತಮ ಗೆಳೆಯ ಅಥವಾ ಗೆಳತಿಯರಾಗುವುದು ದೂರ ಉಳಿಯಿತು, ಉತ್ತಮ ಮನುಷ್ಯ್ರರೂ ಅನ್ನಿಸಿಕೊಳ್ಳೋದಿಲ್ಲ.
೨೦೧೦ , ಡಿಸೆಂಬರ್ ೧೦ ರಂದು ನನಗೆ ಬದುಕೇ ಬೇಸರವಾಗಿದೆ ಅಂತ ನಾನ್ ಹೇಳಿದಾಗ ಅದೇ ಕ್ಷಣ ನೀನು ಹೇಳಿದ್ದೇನು? ಹಾಗೆಲ್ಲ ಹೇಳಬೇಡಿ ನನಗಿಂತ ಹೆಚ್ಚು ದಿನ ಬದುಕುತ್ತೀರಿ ನೀವು ಅಂತ ಹೇಳಿದ್ದಿ. ನನ್ನ ಹ್ರದಯದ ನೋವಿನ ಬಗ್ಗೆ, ಅಪ್ಪ, ಅಮ್ಮ, ತಮ್ಮಂದಿರು, ಹಾಗೂ ಮನೆಯಲ್ಲೂ ಈವರೆಗೆ ಬಾಯಿ ಬಿಟ್ಟಿಲ್ಲ ನಾನು. ಪ್ರತಿಕ್ಷಣಾನೂ ನಾನು ಆ ನೋವಿನ ಝಲಕ್ ಅನುಭವಿಸುತ್ತಿರುತ್ತೇನೆ. ನನ್ನ ಹ್ರದಯದ ನೋವನ್ನು ನಿಮಗೂ ಹೇಳಬಾರದು ಅಂದುಕೊಂಡಿದ್ದೆ. ನನ್ನ ಗೆಳತಿಗೂ ಹೇಳದಿದ್ದರೆ ಅದು ಸ್ನೇಹಕ್ಕೆ ಮತ್ತು ನನಗೆ ನಾನೇ ಮಾಡಿಕೊಳ್ಳುವ ಮೋಸವಾಗುತ್ತದೆ ಅಂತ ಫೀಲ್ ಆಯ್ತು. ಹೇಳಿಕೊಂಡೆ.ಆಗ ನನ್ನ ಕಣ್ಣಲ್ಲಿ ನೀರು ಬಂದ್ರೆ ವ್ಹಾಯ್ ಡಿಯರ್ ಕಣ್ಣಲ್ಲಿ ನೀರು ಬೇರೆಯವರಿಗಾಗಿ ಅಂದೆ ನೀನು.(೧೦.೧೨.೨೦೧೦, ೦೩.೩೮ ಮಧ್ಯಾಹ್ನ) ಗೆಳೆಯ ಅಥವಾ ಗೆಳತಿಗಾಗಿ ಕಣ್ಣೀರು ಹಾಕೋದು ನಿನಗೆ ಬೆರೆಯವರಿಗಾಗಿ ಅಂತ ಯಾಕೆ ಅನ್ನಿಸ್ತು ಗೊತ್ತಾಗ್ತಾ ಇಲ್ಲ. ಸ್ನೇಹಿತರು ಪರಸ್ಪರ ಬೇರೆಯವರಲ್ಲ. ಹಾಗಾದರೆ ದೇಹವೂ ಬೇರೆ, ಆತ್ಮವೂ ಬೇರೆ ಅಂದ ಹಾಗಾಗುತ್ತದೆ.
ನಿಮ್ಮ ಹ್ರದಯವೆ ಒಂದು ಹೂದೋಟ. ಅಲ್ಲಿ ನಮ್ಮ ಸ್ನೇಹವೇ ಒಂದು ಸುಂದರವಾದ ಗುಲಾಬಿ ಅನ್ನುವ ನಿನ್ನ ಸಂದೇಶದಲ್ಲಿಯೇ ಬದುಕಿನ ಬಗ್ಗೆ ನಿನಗಿರುವ ಕಾಳಜಿ ಕಾಣಿಸುತ್ತದೆ. ಅದರೆ ಪ್ರತಿ ಕ್ಷಣವೂ ನಕಾರತ್ಮಕ ಧೋರಣೆಯನ್ನೆ ಮನಸಲ್ಲಿ ಬೆಳೆಸಿಕೊಂಡು ಬಂದಿರುವ ನೀನು ನಿನ್ನ ಭಾವನೆಗಳನ್ನು ನೀನೇ ಹೊಸಕಿ ಹಾಕೋದು ಸಡಿಲಾಗುತ್ತಿರುವ ನಿನ್ನ ಮನಸ್ಸಿನ ಮೇಲಿನ ನಿನ್ನ ಹಿಡಿತ ಕಳೆದುಕೊಳ್ಳುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ನಿಮಗೆ ಇನ್ನೂ ಗೊತ್ತಿಲ್ಲವಾ, ನಿಮ್ ಚಿನ್ನುಗೆ ತಲೆನೆ ಇಲ್ಲ, ಅದಿಕ್ಕೆ ನಿಮ್ ತಲೆ ತಿಂತಿರ್ತೀನಿ. (೧೮.೧೨.೨೦೧೦. ಸಂಜೆ ೦೭-೩೦) ಇಲ್ಲೂ ಕೂಡಾ ನಿನಗೆ ಚಿನ್ನು ಅನ್ನೊ ಪದಬಳಕೆ ಬಗ್ಗೆ ನಿನಗಿರುವ ಖುಷಿಯನ್ನು ಎತ್ತಿ ತೋರಿಸುತ್ತದೆ. ಆದರೆ ಹೇಳಿಕೊಂಡರೆ ಎಲ್ಲಿ ಪೂರ್ತಿ ನನ್ನನ್ನು ಆವರಿಸಿಕೊಳ್ಳುತ್ತಾರೋ ಎಂಬ ಆತಂಕ ನಿನ್ನನ್ನು ಹಾಗೆ ಹೇಳಿಸುತ್ತದೆ. ಅಂದರೆ ಸಾಧವಾದಷ್ಟು ನನ್ನನ್ನು ದೂರ ಇಡುವ ಪ್ರಯತ್ನಕ್ಕೆ ಪ್ರೇರಣೆ ನೀಡುತ್ತದೆ.೨೦.೧೨.೨೦೧೦ ಬೆಲಗಿನ ಜಾವ ೦೪-೩೫ ಕ್ಕೆ ನೀನು ಕೇಳಿದ್ದು, ಆರ್ ಯೂ ಮ್ಯಾಡ್? ಇನ್ನೂ ಮಲಗಿಲ್ಲವಾ? ಅಂತ. ನನ್ನ ಆರೋಗ್ಯದ ಬಗ್ಗೆ ನಿನಗಿರುವ ಕಾಳಜಿ ತೋರಿಸ್ತು. ಸಮಾಧಾನದಿಂದ ಮಲಗಿದೆ.ಇಲ್ಲ ಸ್ವೀಟ್ ಹಾರ್ಟ್ . ಯೂ ಆರ್ ಆಲ್ವೇಜ್ ಮಾಯ್ ಗುರೂಜಿ ಅಂತ ಹೇಳಿದಿಯಲ್ಲ .(೨೦.೧೨.೨೦೧೦ ಮಧ್ಯಾಹ್ನ ೦೧.೫)ಇದೂ ನನ್ನ ಬಗೆಗಿನ ಕಾಳಜಿನೇ ಅಲ್ಲವಾ. ಎಲ್ಲವೂ ಪ್ರೀತಿಯ ಬೇರೆ ಬೇರೆ ಮುಖಗಳೇ. ನಾನು ಬೇಸರಿಸಿಕೊಂಡಾಗ ಖಂದಿತಾ ನಾನು ಯಾವಗಲೂ ನಿಮ್ ಜೊತೆನೇ ಇರತೀನಿ, ಅದರ ಬಗ್ಗೆ ಅನುಮಾನಾನೆ ಬೇಡಾಂತ ನೀನು ಹೇಳಿದೆಯಲ್ಲ ( ೨೫.೧೨.೨೦೧೦ ಸಂಜೆ ೦೫.೩೮) ಇಲ್ಲೂ ಕೂಡ ನನ್ನ ಬಗೆಗಿನ ಕಾಳಜಿಯನ್ನೇ ತೋರಿಸುತ್ತದೆ.
"ನನ್ನ ಉದ್ದೇಶ ನಿಮಗೆ ನೋವು ಕೊಡುವುದಾಗಿರಲಿಲ್ಲ, ನನಗೆ ಹೇಳಬೇಕಾದವರೆ ಯಾವ ಪದಗಳನ್ನ ಹೇಳದೆ ಇರುವಾಗ ಇನೊಬ್ಬರಿಂದ ಅದನ್ಯಾಕೆ ಕೇಳಬೇಕು ಅನ್ನೋ ತಿರಸ್ಕಾರ ಭಾವ ಅಷ್ಟೆ " ಎಂದ ನಿನ್ನ ಮನದ ಭಾವನೆಗಳನ್ನು ( ೨೫.೧೨.೨೦೧೦ ರಾತ್ರಿ ೧೦.೦೪ ) ನಾನು ಖಂಡಿತಾ ಅರ್ಥ ಮಾದಿಕೊಂಡಿದ್ದೇನೆ. ಆ ರೀತಿ ನೀನು ಹೇಳಿರೋಕೆ ಕಾರಣ ಏನು ಅಂತಾನೂ ನಂಗೆ ಅರ್ಥ ಆಗಿದೆ. ಮಾನವೀಯ ಸಂಬಂಧಗಳು ತುಂಬ ಸೂಕ್ಶ್ಮ. ಹಾಗಂತ ಜಗತ್ತಿನಿಂದ ದೂರ ಹೋಗೋದು ಪಲಾಯನವಾದ ಆಗುತ್ತೆ. ಬದುಕಿರೋತನಕಾ ನಾವು ನಾವಾಗಿಯೇ ಇರಬೇಕು.
೧೯೮೯-೮೯ ರ ಅವಧಿಯಲ್ಲಿ ಗೆಳೆಯ ನಾಗತಿಹಳ್ಳಿ ಚಂದ್ರಶೇಖರ ಅವರು ಕಲಬುರ್ಗಿಗೆ ಬಂದಿದ್ರು. ನಾನಾವಾಗ ಬಿಎ ೨ ನೇ ವರ್ಷದಲ್ಲಿದ್ದೆ. ನನ್ನ ಕಥಾ ಸಂಕಲನ " ಕಥಾ ಸೌಗಂಧ" ಬಿಡುಗಡೆ ಮಾಡೋಕೆ ಅವರನ್ನೇ ಕರೆಸಿದ್ದೆವು. ಡಾ. ಹಾ.ಮಾ.ನಾಯಕ ಅವರು ಕಲಬುರ್ಗಿ ವಿವಿ ಗೆ ಕುಲಪತಿಗಳಾಗಿದ್ದರು. ಅವರು ಅಧ್ಯಕ್ಷತೆ ವಹಿಸಿದ್ದರು. ಆ ಸಂದರ್ಭದಲ್ಲಿ ನಾಗತಿಹಳ್ಳಿ ಅವರ "ನನ್ನ ಪ್ರೀತಿಯ ಹುಡುಗಿಗೆ" ಕಥಾ ಸಂಕಲನದ ಬಗ್ಗೆ ಚರ್ಚೆ ಮಾಡಿದ್ವಿ. ಆಗ ಅವ್ರು ಹೇಳಿದ್ದು, "ನಾವು ಒಬ್ಬರನ್ನು ಪ್ರೀತಿಸುತ್ತಿದ್ದೇವೆ ಎಂದರೆ ನಾವು ಮಾನಸಿಕವಾಗಿ ಅವರ ಗುಲಾಮರಾಗುತ್ತಿದ್ದೇವೆ ಎಂತ್ಲೇ ಅರ್ಥ.ಪ್ರೀತಿಸುವ ವ್ಯಕ್ತಿ ಗುಲಾಮಗಿರಿಯ ಆಳಕ್ಕೆ ಹೋಗುತ್ತಾನೆ. ಪ್ರೀತಿಸಲ್ಪಡುವ ವ್ಯಕ್ತಿ ಮಾತ್ರ ಅಹಂಕಾರದ ಮೊಟ್ಟೆಯಾಗುತ್ತಾ ಹೋಗುತ್ತಾನೆ." ಅಂಥದೊಂದು ಅನುಭವದಲ್ಲಿ ನಾನು ಪ್ರಸ್ತುತ ಮುಳುಗೇಳುತ್ತಿದ್ದೇನೆ.
ಮಾತು ಮಾತಿಗೆ ನಾನಿರೋದೆ ಹೀಗೆ ಅಂತ ಪದೇ ಪದೇ ಜಜ್ಮೆಂಟ್ ಯಾಕೆ ಕೊಡತಾ ಇದೀಯೋ ಗೊತ್ತಾಗ್ತಾ ಇಲ್ಲ. ನಾವು ಹೇಗೋ ಇರುತ್ತೇವೆ. ಕೊನೆಯವರೆಗೆ ಹಾಗೆ ಇರಬೇಕು ಅಂತೇನಿಲ್ಲ. ನಿಸರ್ಗದಲ್ಲಿನ ಬದಲಾವಣೆಗಳನ್ನು ನೋಡಿಯಾದ್ರೂ ನಿನ್ನಷ್ಟಕ್ಕೆ ನೀನು ಬದಲಾವಣೆಯತ್ತ ಅನಾವರಣಗೊಳ್ಳಲೇಬೆಕು. ನಿನ್ನ ಜನ್ಮ ಸುಮ್ಮನೆ ನಾಲ್ಕು ಗೋಡೆಗಳ ನಡುವೆ ಕಳೆಯಲು ಖಂಡಿತಾ ಆಗಿಲ್ಲ. ನೀನು ಈ ಜಗತ್ತಿನ ಅದ್ಭುತ ಶಕ್ತಿ ಅನ್ನೋದನ್ನು ತೋರಿಸಿಕೊಡಬೇಕಾಗಿದೆ.
ಈ ಭೂಮಿಯಲ್ಲಿ ಇರುವತನಕ ಖುಶಿಯಾಗಿರಬಯಸುತ್ತೇನೆ. ನಿನ್ನಿಂದಲೂ ಅದನ್ನೇ ಬಯಸುತ್ತೇನೆ.ಮತ್ತೆ ನಿನಗೆ ಬರೆಯಲು ಸಾಧ್ಯವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಕಳೆದ ಒಂದೂವರೆ ತಿಂಗಳಿಂದ ನನ್ನೆದೆಯಲ್ಲಿ ಮುದುರಿಕೊಂಡಿದ್ದ ನಿನ್ನ ಕುರಿತಾದ ನನ್ನ ಭಾವನೆಗಳನ್ನು ಇಲ್ಲಿ ಹರವಿಕೊಂಡಿದ್ದೇನೆ.ನನ್ನ ಮನಸ್ಸನ್ನು ಅನಾವರಣಗೊಳಿಸಿದ್ದೇನೆ.ನನಗೆ ನಾನೆ ಇಲ್ಲಿ ಪೂರ್ತಿ ಬಯಲಾಗಿದ್ದೇನೆ.
ಒಂದು ಮಾತು ಹೇಳದೇ ಹೋದರೆ ಎಲ್ಲೋ ಏನೋ ಕಳೆದುಕೊಂಡಂತಾಗುತ್ತದೆ. ನಿನ್ನ ಕುರಿತಾಗಿ ನನ್ನ ಭಾವನೆಗಳು ಅಂದಿಗೂ ಇಂದಿಗೂ ಹಾಗೇ ಇವೆ. ಕಿಂಚಿತ್ತೂ ಬದಲಾಗಿಲ್ಲ. ನೀನು ನನ್ನ ಅಪ್ಪಟ ಪ್ರೀತಿಯ ಗೆಳತಿ . ಈ ಪ್ರೀತಿಯ ಮುಂದೆ ಎಲ್ಲಾ ಸಂಬಂಧಗಳೂ ಗೌಣವಾಗುತ್ತವೆ.ಸ್ನೇಹ ಸಂಬಂಧ ಈ ಜಗತ್ತಿನ ಅತಿ ದೂಡ್ಡ ಮತ್ತು ಪವಿತ್ರ ಸಂಬಂಧ. ಅದನ್ನು ನಾನು ನೀನು ಕೂಡಿಯೇ ಉಳಿಸಿಕೊಂಡು ಹೋಗಬೇಕಾಗಿದೆ.
ನನ್ನ ಅಂತರ್ಜಾಲ ವಿಳಾಸ: www.bhaavasangama.blogspot.com ಇಲ್ಲಿ ಉಸಿರಿರೋತನಕ ಸಿಗುತ್ತೇನೆ. ಹಾಗಂತ ಇದೇ ಕೊನೆಯ ಪತ್ರ ಅಂತ ಖಂಡಿತಾ ತಿಳಿದುಕೊಳ್ಳಬೇಡ. ನಿನ್ನ ಮಾಹಿತಿಗೆ ಇರಲಿ ಅಂತ ಹೇಳುತ್ತಿದ್ದೇನೆ. ಉಸಿರಿರೋತನಕ ನಿನ್ನೊಂದಿಗೆ ನಾನು ಮಾತಾಡುತ್ತಲೇ ಇರುತ್ತೇನೆ. ಹಾಗೇ ಬರೆಯುತ್ತಲೇ ಇರುತ್ತೇನೆ. ಆದರೆ ಮಧ್ಯದಲ್ಲೇ ಉಸಿರು ನಿಂತರೆ ನನ್ನ ಮಾತುಗಳು ನನ್ನಲ್ಲೇ ಉಳಿದೊಕೋಬಾರದು ಅಂತ ಇಷ್ಟೆಲ್ಲಾ ಹೇಳಬೇಕಾಯಿತು.
ನೀನು ನೀನೇ ಆಗು, ಆದರೆ ಎಲ್ಲರೊಳಗೊಂದಾಗು. ಈ ಜಗತ್ತಿಗೆ ನಿನ್ನ ಕೊಡುಗೆ ನೀಡು.ಅದನ್ನು ನೋಡಿ ನಾನು ಖುಷಿ ಪಡಬೇಕು. ಹೊಸ ವರ್ಷ ೨೦೧೧ ನಿನಗೆ ಎಲ್ಲವನ್ನೂ ಹೊಸದನ್ನು ನೀಡಲಿ. ಅರಂಭದ ದಿನಗಳಲ್ಲೇ ನೀನು ಎಂದಿನಂತೇ ಕೆಲಸಕ್ಕೆ ಹೋಗುವಂತಾಗಲಿ ಎಂದು ಎದೆ ತುಂಬಿ ಹಾರೈಸುತ್ತೇನೆ. ಪ್ರೀತಿಯಿಂದ , ನಿನ್ನ
ಗುರೂಜಿ ೨೭.೧೨.೨೦೧೦
ಪ್ರೀತಿ
ಮೌನದ ನೆಲೆಗಟ್ಟಲ್ಲಿ, ಸೆಲೆಯೊಡೆಯುವ ಪ್ರೀತಿ ಹ್ರದಯಕ್ಕೆ ತಲುಪಿ ಧಮನಿ ಧಮನಿಗಳಲ್ಲಿ ಕುಡಿಯೊಡೆದು ಪಲ್ಲವಿಸಿ ಕಣ್ಣ ಕ್ಯಾಮೆರಾದಲ್ಲಿ ಕ್ಲಿಕ್ ಆಗುತ್ತದೆ : * ಉಮಾತನಯರಾಜ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ